೧. ‘ಧರ್ಮ’ದ ಅರ್ಥವ್ಯಾಪ್ತಿ “ಧೃಙ್ / ಧೃ ಅವಧ್ವಂಸನೇ / ಪರಿತ್ಯಾಗೇ”, “ಧೃಙ್ / ಧೃ ಅವಸ್ಥಾನೇ / ಸ್ಥಿತೌ / ಆಲಂಬನೇ”, “ಧೃಞ್ / ಧೃ ಧಾರಣೇ”— ಎಂಬಂತೆ ಧೃ ಎಂಬ ಸಂಸ್ಕೃತಮೂಲದ ಧಾತುವಿನಿಂದ “ಧರ್ಮಃ / ಧರ್ಮನ್ (ಪುಲ್ಲಿಂಗ— ಧರ್ಮಃ, ಧರ್ಮೌ, ಧರ್ಮಾಃ ಅಥವಾ ಧರ್ಮಾ, ಧರ್ಮಾಣೌ, ಧರ್ಮಾಣಃ) ಅಥವಾ ಧರ್ಮನ್ (ನಪುಂಸಕಲಿಂಗ— ಧರ್ಮ, ಧರ್ಮಣೀೀ, ಧರ್ಮಾಣಿ)” ಎಂಬ ಪದವು ಉಂಟಾಗಿದೆ. ಹೀಗಾಗಿ ಮಿತಿಮೀರಿದ ಅರಿಷಡ್ವರ್ಗಾದಿ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಅತಿಗಳ ವರ್ಜನ / ಪರಿತ್ಯಾಗ, ಜಗತ್ತಿನ ಮೂಲಾಧಾರ / ಆಶ್ರಯಸ್ಥಾನ / ಆಲಂಬನ / ಮೂಲಸ್ಥಿತಿ / ಮೂಲನೆಲೆ, ಲೋಕಗಳನ್ನೆಲ್ಲ ಧರಿಸಿರುವ ಧಾರಣಾಶಕ್ತಿ— ಎಂದು ಮುಂತಾಗಿ ಇದರ ಅರ್ಥ. “ರಾಮೋ ವಿಗ್ರಹವಾನ್ ಧರ್ಮಃ” ಎಂಬುದರಿಂದ ಭಗವಂತನು ಹಾಗೂ ಸತ್ಪುರುಷರು ಧರ್ಮದ ಮೂರ್ತಸ್ವರೂಪ, ಸಾಕಾರಸ್ವರೂಪ . “ಧರತಿ ಲೋಕಾನ್, ಧ್ರಿಯತೇ ಪುಣ್ಯಾತ್ಮಭಿಃ ಇತಿ ವಾ ಧರ್ಮಃ”— ಲೋಕಗಳನ್ನು ಇದು ಧರಿಸುತ್ತದೆ ಅಥವಾ ಪುಣ್ಯಾತ್ಮರಿಂದ ಇದು ಧರಿಸಲ್ಪಡುತ್ತದೆ ಎಂಬುದರಿಂದ ಜಗದ್ಧಾರಣಾಶಕ್ತಿಯೇ ಧರ್ಮವೆನಿಸಿದೆ. ಆದ್ದರಿಂದ ಧರ್ಮಹ್ರಾಸದಿಂದ ಲೋಕಗಳು ಅಲ್ಲೋಲಕಲ್ಲೋಲವಾಗುವುವು. ಆಗ ಭಗವಂತನು ಅವತಾರವೆತ್ತಿ ಬಂದು ದುಷ್ಟಶಿಕ್ಷಣ-ಶಿಷ್ಟರಕ್ಷಣವನ್ನು ಮಾಡಿ ಧರ್ಮವನ್ನು ಪುನಃಸ್ಥಾಪಿಸಿ, ಧರ್ಮದ ಶಕ್ತಿಯಿಂದ ಲೋಕಗಳನ್ನುದ್ಧರಿಸುವನು . (ಭಗವದ್ಗೀತಾ ೪. ೭,೮— “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ...