೨. ಧರ್ಮದ ಮೂಲ ಆಕರಗಳು
वेदो धर्ममूलम् । तद्विदां च स्मृतिशीले ॥ (गौतमधर्मसूत्राणि १.१.२)
ವೇದವೇ ಧರ್ಮದ ಮೂಲ; ಅದನ್ನು ತಿಳಿದವರ ಸಂಪ್ರದಾಯ ಮತ್ತು ಆಚಾರಗಳೂ ಧರ್ಮದ ಮೂಲವೇ ಎಂದಿದೆ ಗೌತಮಧರ್ಮಸೂತ್ರ (೧.೧.೨).
धर्मज्ञसमयः प्रमाणं वेदाश्च ॥ (आपस्तम्बधर्मसूत्राणि १.१.१.२)
ಆಪಸ್ತಂಬಧರ್ಮಸೂತ್ರಗಳಲ್ಲಿ (೧.೧.೧.೨) "ಧರ್ಮಕ್ಕೆ ಪ್ರಮಾಣವೆಂದರೆ ಧರ್ಮವನ್ನೂ ವೇದವನ್ನೂ ತಿಳಿದವರ ಏಕಾಭಿಪ್ರಾಯ" ಎನ್ನಲಾಗಿದೆ.
श्रुतिस्मृतिविहितो धर्मः । तदलाभे शिष्टाचारः प्रमाणम् । शिष्टः पुनरकामात्मा ॥ (वसिष्ठधर्मसूत्रम् १.४.६)
ವಸಿಷ್ಠಧರ್ಮಸೂತ್ರ ೧.೪.೬ ರಲ್ಲಿ, "ವೇದೋಪನಿಷತ್ತುಗಳು (ಶ್ರುತಿಗಳು), ಸ್ಮೃತಿಗಳು ಹಾಗೂ ಧರ್ಮಸೂತ್ರಾದಿ ವೇದಾಂಗಕಲ್ಪಸೂತ್ರಗಳಂತಹ ಧರ್ಮಶಾಸ್ತ್ರಗಳಲ್ಲಿ ಹೇಳಿರುವುದೇ ಧರ್ಮವು. ಅದಿಲ್ಲದಿದ್ದರೆ / ಅದನ್ನು ಬಿಟ್ಟರೆ ಶಿಷ್ಟರು (ಸಾಧು-ಸಂತ-ಮಹಾಂತ-ಜ್ಞಾನಿ-ಮನೀಷಿಗಳು) ಆಚರಿಸಿ ತೋರುವ ಶಿಷ್ಟಾಚಾರವೇ ಪ್ರಮಾಣವು. ಮತ್ತೆ , ಶಿಷ್ಟನೆಂದರೆ ಅಕಾಮಾತ್ಮನು, ಯಾವುದೇ ಬಯಕೆಗಳಿಲ್ಲದ ಪೂರ್ಣಕಾಮನು, ಆಪ್ತಕಾಮನು.
वेदोऽखिलो धर्ममूलं स्मृतिशीले च तद्विदाम् ।
आचारश्चैव साधूनामात्मनस्तुष्टिरेव च ॥
(मनुस्मृतिः २.६)
ಇಡೀ ವೇದವು ಧರ್ಮಕ್ಕೆ ಬಲು ಮುಖ್ಯವಾದ ಆಕರ. ಅನಂತರ ಅದನ್ನು ತಿಳಿದವರ ಸಂಪ್ರದಾಯ; ಶೀಲವಂತರ, ಚಾರಿತ್ರ್ಯವಂತರ (ಸಾಧುಗಳ) ಆಚಾರ; ಮತ್ತು ಆತ್ಮಸಂತೋಷ ಎಂದಿದೆ ಮನುಸ್ಮೃತಿ ೨.೬.
श्रुतिः स्मृतिः सदाचारः स्वस्य च प्रियमात्मनः ।
सम्यक्सङ्कल्पजः कामो धर्ममूलमिदं स्मृतम् ॥
(याज्ञवल्क्यस्मृतिः १.७)
ಮನುವಿನಂತೆಯೇ ಯಾಜ್ಞವಲ್ಕ್ಯನು "ಶ್ರುತಿ, ಸ್ಮೃತಿ, ಸದಾಚಾರ, ತನಗೇ ಹಿತವಾದುದು, ಸತ್ಸಂಕಲ್ಪದಿಂದ ಎದ್ದ ಬಯಕೆ— ಇವುಗಳೇ ಧರ್ಮದ ಮೂಲವೆನ್ನಲಾಗಿದೆ" ಎಂದಿರುವನು.
ಒಟ್ಟಿನಲ್ಲಿ ಹೇಳುವುದಾದರೆ, ಭಾರತೀಯ ಧರ್ಮದ ಬೇರುಗಳು—
೧) ವೈದಿಕ ಸಂಹಿತೆಗಳು— ಋಗ್ವೇದ (ಪದ್ಯಾತ್ಮಕ, ಛಂದೋಬದ್ಧ ದೇವತಾಸ್ತೋತ್ರಗಳು, ಸೂಕ್ತಗಳು; ಶಾಕಲ, ಬಾಷ್ಕಲ ಶಾಖೆಗಳು), ಯಜುರ್ವೇದ (ಗದ್ಯಾತ್ಮಕ, ಯಜ್ಞಪ್ರಧಾನ ನಿಗದ; ಕೃಷ್ಣಯಜು— ತೈತ್ತಿರೀಯ, ಮೈತ್ರಾಯಣೀಯ, ಕಾಠಕ, ಕಪಿಷ್ಠಲ-ಕಠಶಾಖೆಗಳು; ಶುಕ್ಲಯಜು / ವಾಜಸನೇಯ— ಮಾಧ್ಯಂದಿನ, ಕಾಣ್ವಶಾಖೆಗಳು ) ಸಾಮವೇದ (ಗೇಯಪ್ರಧಾನ; ಕೌಥುಮ, ರಾಣಾಯನೀಯ, ಜೈಮಿನೀಯಶಾಖೆಗಳು), ಅಥರ್ವವೇದ ಸಂಹಿತೆ / ಮಂತ್ರಗಳು (ಯಾಗದಲ್ಲಿ ಬಳಕೆಯಿಲ್ಲ; ವೈದ್ಯಕೀಯ, ಶಸ್ತ್ರಚಿಕಿತ್ಸೆ, ಅನಿಷ್ಟ ನಿವಾರಣೆ, ಶಾಂತಿಗಳು— ಪಿಪ್ಪಲಾದ, ಶೌನಕೀಯಶಾಖೆಗಳು)
೨) ಬ್ರಾಹ್ಮಣಗಳು (ಋಕ್— ಐತರೇಯ, ಕೌಷೀತಕೀ; ಯಜುಸ್— ಕೃಷ್ಣ—ತೈತ್ತಿರೀಯ, ಶುಕ್ಲ—ಶತಪಥ; ಸಾಮ— ತಾಂಡ್ಯ, ಷಡ್ವಿಂಶ, ಸಾಮವಿಧಾನ, ಆರ್ಷೇಯ, ದೈವತ, ಉಪನಿಷದ್, ಸಂಹಿತೋಪನಿಷದ್, ವಂಶ ಹಾಗೂ ಜೈಮಿನೀಯ ಬ್ರಾಹ್ಮಣಗಳು, ಅಥರ್ವ— ಗೋಪಥಬ್ರಾಹ್ಮಣ ಹಾಗೂ ಋಗ್ವೇದದ ಐತರೇಯ, ಕೌಷೀತಕೀ ಉಪನಿಷತ್ ಗಳು, ಕೃಷ್ಣಯಜುರ್ವೇದದ ತೈತ್ತಿರೀಯೋಪನಿಷತ್ ಹಾಗೂ ಕಠೋಪನಿಷತ್, ಶುಕ್ಲಯಜುರ್ವೇದದ ಈಶ, ಬೃಹದಾರಣ್ಯಕ, ಸಾಮವೇದದ ಛಾಂದೋಗ್ಯ, ಕೇನೋಪನಿಷತ್, ಅಥರ್ವವೇದದ ಪ್ರಶ್ನ, ಮುಂಡಕ, ಮಾಂಡೂಕ್ಯದಂತಹ ಕೆಲವು ಪ್ರಾಚೀನ ಉಪನಿಷತ್ತುಗಳು)
[೧ ಮತ್ತು ೨ ಸೇರಿ ವೇದ / ಶ್ರುತಿ ಎನಿಸಿದೆ. (मन्त्रब्राह्मणयोः वेदनामधेयम् , मन्त्राश्च ब्राह्मणं च वेदः)]
೩) ವೇದದ ಷಡಂಗಗಳಲ್ಲೊಂದಾದ ಕಲ್ಪಸೂತ್ರಗಳು (ಕಲ್ಪಶಾಸ್ತ್ರ)— ೪ ವಿಧ— ಶ್ರೌತಸೂತ್ರಗಳು (ಶ್ರೌತಾಗ್ನಿಯಿಂದ ಮಾಡಬೇಕಾದ ವೈದಿಕ ಮಹಾಯಾಗಗಳ ಕುರಿತು), ಶುಲ್ಬಸೂತ್ರಗಳು (ಯಜ್ಞಕುಂಡಗಳ, ವೇದಿಗಳ ಸಂರಚನೆ, ಅಳತೆಗಳ ಜ್ಯಾಮಿತಿಯ ಬಗ್ಗೆ). ಗೃಹ್ಯಸೂತ್ರಗಳು (ಗೃಹ್ಯಾಗ್ನಿಯಿಂದ ಮಾಡಬೇಕಾದ ಆಯಾ ಶಾಖಾವಾರು ಸಂಸ್ಕಾರ, ನಿತ್ಯ-ನೈಮಿತ್ತಿಕ ಮೊದಲಾದ ಗೃಹ್ಯವಿಧಿಗಳ ಬಗ್ಗೆ) ಹಾಗೂ ಧರ್ಮಸೂತ್ರಗಳು (ವರ್ಣಾಶ್ರಮಕರ್ತವ್ಯಗಳು, ಆಚಾರಗಳು ಹಾಗೂ ರಾಜಧರ್ಮ, ಆರ್ಥಿಕ, ಸಾಮಾಜಿಕ, ರಾಜಕೀಯ, ನ್ಯಾಯ, ವ್ಯವಹಾರ, ಪ್ರಾಯಶ್ಚಿತ್ತ ಮುಂತಾದ ವಿಧಿಗಳು).
ಅ) ಶ್ರೌತಸೂತ್ರಗಳು— (ಪುರೋನುವಾಕ್ಯಾ, ಯಾಜ್ಯಾ, ಶಸ್ತ್ರಗಳ ಅನುಷ್ಠಾನ) ಋಗ್ವೇದಕ್ಕೆ ಆಶ್ವಲಾಯನ, ಕೃಷ್ಣಯಜುರ್ವೇದಕ್ಕೆ ಬೋಧಾಯನ, ಆಪಸ್ತಂಬ, ಸತ್ಯಾಷಾಢ, ವೈಖಾನಸ, ಭಾರದ್ವಾಜ ಮತ್ತು ಮಾನವ, ಶುಕ್ಲಯಜುರ್ವೇದಕ್ಕೆ ಕಾತ್ಯಾಯನ, ಸಾಮವೇದಕ್ಕೆ ಆರ್ಷೇಯ, ಲಾಟ್ಯಾಯನ, ದ್ರಾಹ್ಯಾಯಣ, ಜೈಮಿನೀಯ ಮತ್ತು ಅಥರ್ವವೇದಕ್ಕೆ ವೈತಾನಶ್ರೌತಸೂತ್ರ ಲಭ್ಯ.
ಆ) ಶುಲ್ಬಸೂತ್ರಗಳು— ಕಾತ್ಯಾಯನಶುಲ್ಬಸೂತ್ರಗಳು
ಇ) ಗೃಹ್ಯಸೂತ್ರಗಳು— (ಗೃಹ್ಯಾಗ್ನಿಯಿಂದ ಮಾಡಬೇಕಾದ ವಿವಾಹೋಪನಯನಾದಿ ಗೃಹ್ಯಕರ್ಮಗಳ ಔಚಿತ್ಯ, ಸಾರ್ಥಕತೆ, ಗೃಹಸ್ಥನು ಮಾಡಬೇಕಾದ ಸಂಸ್ಕಾರಗಳ, ವೈಶ್ವದೇವ, ಕೃಷಿಕರ್ಮ, ಶ್ರಾದ್ಧಾದಿಗಳ ವರ್ಣನೆ, ಗೃಹನಿರ್ಮಾಣ, ಗೃಹಪ್ರವೇಶ) ಋಗ್ವೇದದ ಶಾಕಲಶಾಖೆಗೆ ಆಶ್ವಲಾಯನ, ಶಾಂಖಾಯನ, ಬಾಷ್ಕಲಶಾಖೆಗೆ ಕೌಷೀತಕ, ಶುಕ್ಲಯಜುರ್ವೇದಕ್ಕೆ ಪಾರಸ್ಕರ, ಬೈಜವಾಪ್ಯ ಕೃಷ್ಣಯಜುರ್ವೇದಕ್ಕೆ ಬೋಧಾಯನ, ಆಪಸ್ತಂಬ, ಭರದ್ವಾಜ, ಹಿರಣ್ಯಕೇಶಿ, ಮೈತ್ರಾಯಣೀಯ ಮಾನವ, ವೈಖಾನಸ ಸ್ಮಾರ್ತ, ಕಾಠಕ (ಚರಕ / ಲೌಗಾಕ್ಷಿ / ಚಾರಾಯಣೀಯ / ಗೃಹ್ಯಪಂಚಿಕಾ), ಮೈತ್ರಾಯಣೀಯ ವಾರಾಹ, ಅಗ್ನಿವೇಶ ಸಾಮವೇದದ ಕೌಥುಮಶಾಖೆಗೆ ಗೋಭಿಲ, ರಾಣಾಯನೀಯಶಾಖೆಗೆ ಖಾದಿರ, ಜೈಮಿನೀಯಶಾಖೆಗೆ ಜೈಮಿನೀಯ, ದ್ರಾಹ್ಯಾಯಣಅಥರ್ವವೇದಕ್ಕೆ ಕೌಶಿಕಗೃಹ್ಯಸೂತ್ರ (ಯಾತುವಿದ್ಯೆ, ಗಿಡಮೂಲಿಕೆ).
ಈ) ಧರ್ಮಸೂತ್ರಗಳು— ಋಗ್ವೇದಕ್ಕೆ ವಸಿಷ್ಠ, ಮಾನವ, ಸಾಮವೇದದ ರಾಣಾಯನೀಯಶಾಖೆಗೆ ಗೌತಮ, ಕೃಷ್ಣಯಜುರ್ವೇದಕ್ಕೆ ಬೋಧಾಯನ, ಆಪಸ್ತಂಬ, ಹಿರಣ್ಯಕೇಶಿ, ವೈಖಾನಸ, ಹಾರೀತ ಕಠಶಾಖೆಯ ವಿಷ್ಣು ಶುಕ್ಲಯಜುರ್ವೇದಕ್ಕೆ ಶಂಖಲಿಖಿತಧರ್ಮಸೂತ್ರ.
ಇದರ ಬಳಿಕ, ಸ್ಮೃತಿಗಳೂ (ಧರ್ಮಶಾಸ್ತ್ರಗಳೂ), ಉಪಸ್ಮೃತಿಗಳೂ, ಪುರಾಣಗಳೂ ಬರುತ್ತವೆ. ಇವುಗಳಲ್ಲಿ ವೈರುಧ್ಯವಿದ್ದಾಗ, ಹಿಂದುಹಿಂದನವೇ ಹೆಚ್ಚು ಪ್ರಮಾಣವಾಗುತ್ತವೆ. ಉದಾ- ಪುರಾಣದ ಯಾವುದೇ ವಿಚಾರದಲ್ಲಿ ಸಂದೇಹವಿದ್ದರೆ ಸ್ಮೃತಿಗಳು ಪ್ರಮಾಣ. ಸ್ಮೃತಿಗಳಲ್ಲಿ ಸಂದೇಹ ಬಂದಾಗ ಕಲ್ಪಸೂತ್ರಗಳೂ, ಅವುಗಳಲ್ಲಿ ಸಂದಿಗ್ಧತೆಯಿದ್ದರೆ ಉಪನಿಷತ್, ಆರಣ್ಯಕ, ಬ್ರಾಹ್ಮಣಗ್ರಂಥಗಳೂ, ಇವೆಲ್ಲಕ್ಕೂ ವೇದಸಂಹಿತಾಮಂತ್ರಗಳೂ ಪರಮಪ್ರಮಾಣವೆನಿಸಿ, ಭಾರತೀಯ ಧರ್ಮಶಾಸ್ತ್ರಗಳ ಮೂಲ ಆಧಾರಸ್ತಂಭಗಳೆನಿಸಿವೆ.
Comments
Post a Comment