೩. ಧರ್ಮಶಾಸ್ತ್ರದ ವಿವಿಧ ವಿಷಯಗಳು
ಪ್ರಾಚೀನ ಭಾರತೀಯ ಧರ್ಮಸೂತ್ರಗಳು ಪ್ರಧಾನವಾಗಿ ಈ ಮುಂದಿನ ವಿಷಯಗಳನ್ನು ಸ್ವಲ್ಪ ಹೆಚ್ಚು ಕಡಿಮೆ ವಿವರವಾಗಿ ವರ್ಣಿಸುತ್ತವೆ.
- ವಿವಿಧ ವರ್ಣಗಳು (ವರ್ಗಗಳು), ಆಶ್ರಮಗಳು, ಅವುಗಳ ಹಕ್ಕುಗಳು, ಕರ್ತವ್ಯಗಳು ಮತ್ತು ಜವಾಬ್ದಾರಿಗಳು;
- (ಗರ್ಭಾಧಾನದಿಂದ ಅಂತ್ಯೇಷ್ಟಿಯ ವರೆಗೆ) ವ್ಯಕ್ತಿಯೊಬ್ಬನಿಗೆ ಮಾಡುವ ಸಂಸ್ಕಾರಗಳು;
- ಬ್ರಹ್ಮಚಾರಿಯ (ಪ್ರಥಮಾಶ್ರಮಿಯ) ಕರ್ತವ್ಯಗಳು, ಅನಧ್ಯಯನಗಳು (ವೇದಾಧ್ಯಯನವನ್ನು ನಿಲ್ಲಿಸುವ / ಮಾಡಬಾರದ ದಿನಗಳು);
- (ಜೀವನದ ಮೊದಲ ಹಂತವಾದ ಬ್ರಹ್ಮಚರ್ಯಾಶ್ರಮದ ವಿದ್ಯಾರ್ಥಿದೆಸೆಯನ್ನು ಮುಗಿಸಿದ) ಸ್ನಾತಕನ ಕರ್ತವ್ಯಗಳು;
- ವಿವಾಹ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು;
- ಗೃಹಸ್ಥ (ವಿವಾಹಿತ) ನ ಕರ್ತವ್ಯಗಳು;
- ಶೌಚ (ದೇಹದ ದೈನಂದಿನ ಶುದ್ಧಿ);
- ಪ್ರತಿದಿನದ ಪಂಚಯಜ್ಞಗಳು;
- ದಾನ;
- ಭಕ್ಷ್ಯಾಭಕ್ಷ್ಯ (ಯಾವ ಆಹಾರವನ್ನು ಸೇವಿಸಬೇಕು; ಯಾವುದನ್ನು ಕೂಡದು);
- (ವ್ಯಕ್ತಿಗಳ, ಪಾತ್ರೆಗಳ, ಬಟ್ಟೆಗಳ ಮುಂತಾದವುಗಳ) ಶುದ್ಧಿ;
- ಅಶೌಚ (ಹುಟ್ಟು-ಸಾವುಗಳಿಂದ ಬರುವ ಮೈಲಿಗೆ);
- ಅಂತ್ಯೇಷ್ಟಿ (ಸತ್ತ ನಂತರ ಮಾಡುವ ಕರ್ಮಗಳು);
- ಶ್ರಾದ್ಧ (ಸತ್ತ ಪೂರ್ವಜರು ಮತ್ತು ಬಂಧುಗಳಿಗಾಗಿ ಮಾಡುವ ಕರ್ಮಗಳು);
- ಸ್ತ್ರೀಧರ್ಮ (ಹೆಂಗಸರ ವಿಶೇಷ ಕರ್ತವ್ಯಗಳು);
- ಸ್ತ್ರೀ-ಪುಂ-ಧರ್ಮ (ಸತಿ-ಪತಿಯರ ಪರಸ್ಪರ ಕರ್ತವ್ಯಗಳು);
- ಕ್ಷತ್ರಿಯರ ಮತ್ತು ರಾಜರ ಧರ್ಮಗಳು;
- ವ್ಯವಹಾರ (ನ್ಯಾಯಾಲಯದ ಕಟ್ಟಳೆಕ್ರಮ, ಮತ್ತು ಅಪರಾಧ ಹಾಗೂ ಶಿಕ್ಷೆ, ಒಪ್ಪಂದ, ಆಸ್ತಿವಿಭಾಗ ಮತ್ತು ಉತ್ತರಾಧಿಕಾರತ್ವ, ದತ್ತುಸ್ವೀಕಾರ, ಜೂಜು— ಮುಂತಾದವುಗಳನ್ನೊಳಗೊಂಡ ವಿಹಿತಶಾಸನದ ಕ್ಷೇತ್ರ);
- ಪ್ರಧಾನವಾದ ೪ ವರ್ಗಗಳು, ಸಂಕರ ಜಾತಿಗಳು ಮತ್ತು ಅವುಗಳ ಕಸುಬುಗಳು;
- ಆಪದ್ಧರ್ಮ (ಅತ್ಯಂತ ಕಷ್ಟದ ಸಮಯದಲ್ಲಿ ವಿವಿಧ ಜಾತಿಗಳು ಅನುಸರಿಸಬಹುದಾದ ಕಾರ್ಯಗಳು ಮತ್ತು ಕಸುಬುಗಳು);
- ಪ್ರಾಯಶ್ಚಿತ್ತ (ಪಾಪಗಳು ಮತ್ತು ಅವನ್ನು ಪರಿಹರಿಸಿಕೊಳ್ಳುವ ಬಗೆ);
- ಕರ್ಮವಿಪಾಕ (ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಕೃತ್ಯಗಳ ಫಲಗಳು);
- ಶಾಂತಿ (ಅರಿಷ್ಟಗಳು ಸಂಭವಿಸಿದಾಗ ಅಥವಾ ಗ್ರಹಗಳನ್ನು ಒಲಿಸಲು ಮಾಡುವ ಕರ್ಮಗಳು);
- ವಾನಪ್ರಸ್ಥನ ಮತ್ತು ಸಂನ್ಯಾಸಿಯ ಧರ್ಮಗಳು;
- ವ್ರತಗಳು;
- ಉತ್ಸರ್ಗ ಮತ್ತು ಪ್ರತಿಷ್ಠೆ (ಸರ್ವಜನೋಪಯೋಗಿಯಾದ ಕೆಲಸಗಳ ಮತ್ತು ದೇವಾಲಯಗಳ ಸಮರ್ಪಣೆ);
- ತೀರ್ಥಯಾತ್ರೆ (ಪವಿತ್ರಕ್ಷೇತ್ರಗಳು ಮತ್ತು ಅವುಗಳ ಯಾತ್ರೆ);
- ಕಾಲ (ಒಳ್ಳೆಯ ಕಾಲ, ಉತ್ಸವಗಳು, ಇತ್ಯಾದಿ).
ಇದರಿಂದ ನಮಗೆ ತಿಳಿಯುವುದೇನೆಂದರೆ, ಧರ್ಮಶಾಸ್ತ್ರಕಾರರ ಪ್ರಕಾರ ಧರ್ಮವೆಂದರೆ ಒಂದು ಪಂಥ ಅಥವಾ ಮತವಲ್ಲ; ಆದರೆ ಅದು ಇಡೀ ಮಾನವ ಜೀವನದ ಎಲ್ಲ ಹಂತಗಳನ್ನೂ, ಸನ್ನಿವೇಶಗಳನ್ನೂ ಒಳಗೊಂಡು, ಮಾನವ ಜೀವಿತದ ಪರಮಗುರಿಯನ್ನು ಕ್ರಮಕ್ರಮವಾಗಿ ಮುನ್ನಡೆಸಿ ತಲುಪಿಸಲು ಸಹಾಯಕವಾಗುವ ಒಂದು ವ್ಯವಸ್ಥಿತ ಜೀವನಪದ್ಧತಿ ಅಥವಾ ನಡತೆಯ ಒಂದು ನೀತಿ.
ಈ ದೃಷ್ಟಿಯಿಂದ ಧರ್ಮವನ್ನು ಶ್ರೌತ ಮತ್ತು ಸ್ಮಾರ್ತ ಎಂದು ವಿಭಾಗಿಸಲಾಗಿತ್ತು. ಮೊದಲನೆಯದು ಮುಖ್ಯವಾಗಿ ವೇದದ ಸಂಹಿತೆಗಳು ಮತ್ತು ಬ್ರಾಹ್ಮಣಗ್ರಂಥಗಳ (/ಬ್ರಾಹ್ಮಣವರ್ಗದ) ಕುರಿತಾದ ಕರ್ಮ-ಸಂಸ್ಕಾರಗಳನ್ನು ಒಳಗೊಂಡಿತ್ತು. ಅವು—
- ಗಾರ್ಹಪತ್ಯಾಗ್ನಿ, ಆಹವನೀಯಾಗ್ನಿ ಹಾಗೂ ದಕ್ಷಿಣಾಗ್ನಿಯೆಂಬ ತ್ರೇತಾಗ್ನಿನಾಮಕ ಮೂರು ಪವಿತ್ರಾಗ್ನಿಗಳ ಆಧಾನ;
- ಹುಣ್ಣಿಮೆ ಮತ್ತು ಅಮಾವಾಸ್ಯೆಗಳ (ಪೂರ್ಣಮಾಸ-ದರ್ಶ)ಯಾಗಗಳು;
- ಪ್ರಮುಖವಾದ ಸೋಮಯಾಗಗಳು, ಇತ್ಯಾದಿ.
ಮುಖ್ಯವಾಗಿ ಸ್ಮೃತಿಗಳಲ್ಲಿ ಹೇಳಿದ, ವರ್ಣಾಶ್ರಮಗಳ ಕುರಿತಾದ ವಿಚಾರಗಳನ್ನು ಸ್ಮಾರ್ತ ಧರ್ಮವು ಒಳಗೊಂಡಿತ್ತು.
ದಾರಾಗ್ನಿಹೋತ್ರಸಂಬಂಧಮ್ ಇಜ್ಯಾ ಶ್ರೌತಸ್ಯ ಲಕ್ಷಣಮ್ |
ಸ್ಮಾರ್ತೋ ವರ್ಣಾಶ್ರಮಾಚಾರೋ ಯಮೈಶ್ಚ ನಿಯಮೈರ್ಯುತಃ ||
(ಮತ್ಸ್ಯಪುರಾಣ ೧೪೪ | ೩೦-೩೧; ವಾಯುಪುರಾಣ ೫೯ | ೩೧-೩೨ ಮತ್ತು ೩೯)
ಸಪತ್ನೀಕನಾಗಿ ಮಾಡಬೇಕಾದ ಅಗ್ನಿಹೋತ್ರಾದಿಗಳಿಗೆ ಸಂಬಂಧಿಸಿದ ದೇವತಾಕರ್ಮಗಳು ಶ್ರೌತಧರ್ಮಗಳು. ಯಮ-ನಿಯಮಾದಿಗಳಿಂದ ಕೂಡಿದ ಚತುರ್ವರ್ಣಗಳ (ಬ್ರಹ್ಮ, ಕ್ಷತ್ರಿಯ, ವೈಶ್ಯ, ಶೂದ್ರ) ಹಾಗೂ ಚತುರಾಶ್ರಮಗಳ (ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ) ಆಚಾರಸೂತ್ರಗಳು ಸ್ಮಾರ್ತಧರ್ಮಗಳು.
ಅಗ್ನ್ಯಾಧಾನಾದಿ-ಪೂರ್ವಕೋ ಅಧೀತ-ಪ್ರತ್ಯಕ್ಷ-ವೇದಮೂಲೋ ದರ್ಶ-ಪೂರ್ಣಮಾಸಾದಿಃ ಶ್ರೌತಃ | ಅನುಮಿತ-ಪರೋಕ್ಷಶಾಖಾಮೂಲಃ ಶೌಚ-ಆಚಮನಾದಿಃ ಸ್ಮಾರ್ತಃ ||
(ಪರಾಶರಮಾಧವೀಯ ೧ | ೧ | ಪುಟ ೬೪)
ಮೇಲೆ ಹೇಳಿದ ತ್ರೇತಾಗ್ನಿಗಳ ಆಧಾನ (ಪರಿಗ್ರಹ, ಪ್ರಜ್ವಲನ, ಪ್ರತಿಷ್ಠಾದಿಗಳು) ಪೂರ್ವಕವಾಗಿ, ಅಧ್ಯಯನ ಮಾಡಿದ ವೇದಸಂಹಿತೆಗಳ ಪ್ರತ್ಯಕ್ಷಪ್ರಮಾಣದ ಆಧಾರದಲ್ಲಿ ಆಚರಿಸುವ, ದರ್ಶ-ಪೂರ್ಣಮಾಸಾದಿ ಯಾಗಗಳ ಅನುಷ್ಠಾನಾದಿಗಳು ಶ್ರೌತಧರ್ಮ. ಜ್ಞಾನಿಗಳಿಂದಲೂ, ವೇದಗಳಿಂದಲೂ ಒಪ್ಪತಕ್ಕ, ಅನುಮತಿಸಲ್ಪಟ್ಟ ಪರೋಕ್ಷಶಾಸ್ತ್ರಶಾಖೆಗಳಾದ ಸ್ಮೃತಿಗಳೇ ಮುಂತಾದವುಗಳ ಆಧಾರದಲ್ಲಿ ನಡೆಸುವ ಶೌಚ, ಆಚಮನಾದಿ ಆಚಾರನಿಯಮಗಳು ಸ್ಮಾರ್ತಧರ್ಮ ಎಂದಿರುವರು ಪರಾಶರಸ್ಮೃತಿಗೆ ಪರಾಶರಮಾಧವೀಯ ಟೀಕೆಯನ್ನು ಬರೆದ ಸಾಯಣಮಾಧವಾಚಾರ್ಯರು.
※ ಧರ್ಮವನ್ನು ೩ ವಿಧವಾಗಿ ವಿಂಗಡಿಸಿದೆ ಮಹಾಭಾರತ—
ವೇದೋಕ್ತಃ ಪರಮೋ ಧರ್ಮಃ ಸ್ಮೃತಿಶಾಸ್ತ್ರಗತೋऽಪರಃ |
ಶಿಷ್ಟಾಚೀರ್ಣಃ ಪರಃ ಪ್ರೋಕ್ತಸ್ತ್ರಯೋ ಧರ್ಮಾಃ ಸನಾತನಾಃ ||
(ಅನುಶಾಸನಪರ್ವ ೧೪೧.೬೫, ವನಪರ್ವ ೨೦೭.೮೩)
ಶ್ರೌತ (ವೈದಿಕ, ವೇದೋಕ್ತ), ಸ್ಮಾರ್ತ (ಸ್ಮೃತ್ಯಾಧಾರಿತ) ಹಾಗೂ ಶಿಷ್ಟಾಚಾರ (ಸಂಪ್ರದಾಯವಿದ ಶಿಷ್ಟರ, ಜ್ಞಾನಿಗಳ, ಮಹಾತ್ಮರ ಆಚಾರ)— ಇವು ಮೂರೂ ಬಗೆಯ ಧರ್ಮಗಳೂ ಸನಾತನವಾದುವು.
ವೇದೋಕ್ತಃ ಪರಮೋ ಧರ್ಮೋ ಧರ್ಮಶಾಸ್ತ್ರೇಷು ಚಾಪರಃ |
ಶಿಷ್ಟಾಚಾರಶ್ಚ ಶಿಷ್ಟಾನಾಂ ತ್ರಿವಿಧಂ ಧರ್ಮಲಕ್ಷಣಮ್ ||
(ಶಾಂತಿಪರ್ವ ೩೫೪.೬)
ವೇದೋಕ್ತ ಶ್ರೌತಧರ್ಮವು ಪರಮಶ್ರೇಷ್ಠವಾದದ್ದು. ಸ್ಮೃತಿ / ಧರ್ಮಶಾಸ್ತ್ರ— ಧರ್ಮಸೂತ್ರಾದಿಗಳಲ್ಲಿ ಹೇಳಿರುವ ಸ್ಮಾರ್ತಧರ್ಮವು ಇನ್ನೊಂದು ಬಗೆಯದ್ದು. ಶಿಷ್ಟರ, ಸತ್ಪುರುಷರ, ಮಹಾತ್ಮರ ಆಚಾರ-ವಿಚಾರಾದಿ ಶಿಷ್ಟಾಚಾರ / ಸಂಪ್ರದಾಯ / ನಡೆವಳಿಕೆಗಳು ಹಿಂದಿನೆಡರ ಅರಿವಿಲ್ಲದವರಿಗೆ, ಅರಿವಿದ್ದೂ ಇದಮಿತ್ಥಂ (ಇದಂ— ಇದು, ಇತ್ಥಂ— ಹೀಗೆಯೇ, ಈರೀತಿಯಾಗಿಯೇ ಎಂದು) ನಿರ್ಣಯಿಸಲಾಗದಂತಹ ಅಂತಃಕರಣಶುದ್ಧಿಯಿಲ್ಲದವರಿಗೆ ಮೂರನೆಯ ವಿಧದ ಧರ್ಮಪ್ರಮಾಣಗಳು.
ಉಪದಿಷ್ಟೋ ಧರ್ಮಃ ಪ್ರತಿವೇದಮ್ | ...ಸ್ಮಾರ್ತೋ ದ್ವಿತೀಯಃ ತೃತೀಯಃ ಶಿಷ್ಟಾಗಮಃ ||
(ಬೌಧಾಯನಧರ್ಮಸೂತ್ರ ೧ | ೧ | ೧-೪)
ಪ್ರತಿಯೊಂದು ವೇದವೂ ಧರ್ಮವನ್ನು ಉಪದೇಶಿಸಿರುವುದು. ಅದೇ ಶ್ರೌತ. ಸ್ಮೃತ್ಯಾದಿ ಧರ್ಮಶಾಸ್ತ್ರಗಳ ಮತವು ಸ್ಮಾರ್ತವೆಂಬ ಎರಡನೆಯ ವಿಧ. ಮೂರನೆಯದೆ ಶಿಷ್ಟರಿಂದ ಆಗತವಾಗಿರುವುದು / ಬಂದಿರುವುದು / ಆಗಮಶಾಸ್ತ್ರಗಳು.
※ ಮನುಸ್ಮೃತಿ ೨.೨೫ ರ ವ್ಯಾಖ್ಯಾನದಲ್ಲಿ ಮೇಧಾತಿಥಿಯ ಅಭಿಪ್ರಾಯ—
ಇಹ ಚ ಪಂಚಪ್ರಕಾರೋ ಧರ್ಮ ಇತಿ ವಿವರಣಕಾರಾಃ ಪ್ರಪಂಚಯಂತಿ | ಅತ್ರ ಚ ಧರ್ಮಶಬ್ದಃ ಷಡ್ವಿಧ-ಸ್ಮಾರ್ತಧರ್ಮ-ವಿಷಯಃ | ತದ್ಯಥಾ— ವರ್ಣಧರ್ಮ ಆಶ್ರಮಧರ್ಮೋ ವರ್ಣಾಶ್ರಮಧರ್ಮೋ ಗುಣಧರ್ಮೋ ನಿಮಿತ್ತಧರ್ಮಃ ಸಾಧಾರಣಧರ್ಮಃ ಚ ಇತಿ ||
ಇಹಲೋಕದಲ್ಲಾದರೋ / ಧರ್ಮವಿಚಾರದಲ್ಲಾದರೋ ೫ ಪ್ರಕಾರವಾಗಿರುವುದು ಧರ್ಮವು ಎಂದು ವಿವರಣಕಾರರು ವಿಸ್ತರಿಸುತ್ತಾರೆ. ಇಲ್ಲಿ / ಈ ವಾಕ್ಯದಲ್ಲಿ / ಪ್ರಸ್ತುತ ಗ್ರಂಥವಾದ ಮನುಸ್ಮೃತಿಯಲ್ಲಿ ಹಾಗೂ ಅದರ ಮೇದಾತಿಥಿಕೃತ ಭಾಷ್ಯದಲ್ಲಿ ಧರ್ಮಶಬ್ದವು ೬ ವಿಧವಾದ ಸ್ಮಾರ್ತಧರ್ಮದ ವಿಷಯವನ್ನು ಕುರಿತಾದದ್ದು. ಅದು ಹೇಗೆಂದರೆ—
(೧) ವರ್ಣಧರ್ಮ (ಉದಾ— ಬ್ರಾಹ್ಮಣನು ಎಂದೂ ಮದ್ಯಪಾನ ಮಾಡಬಾರದು)
(೨) ಆಶ್ರಮಧರ್ಮ (ಉದಾ— ಬ್ರಹ್ಮಚಾರಿಗೆ ಭಿಕ್ಷೆಬೇಡುವ ಹಾಗೂ ದಂಡ ಹಿಡಿಯುವ ಧರ್ಮ)
(೩) ವರ್ಣಾಶ್ರಮಧರ್ಮ (ಉದಾ— ಬ್ರಾಹ್ಮಣ ಬ್ರಹ್ಮಚಾರಿಯು ಪಲಾಶವೃಕ್ಷದ ದಂಡವನ್ನು ಹಿಡಿದುಕೊಳ್ಳಬೇಕು)
(೪) ಗುಣಧರ್ಮ (ಉದಾ— ರಾಜನು ಪ್ರಜೆಗಳ ರಕ್ಷಣೆಯನ್ನು ಮಾಡಬೇಕು)
(೫) ನಿಮಿತ್ತಧರ್ಮ / ನೈಮಿತ್ತಿಕಧರ್ಮ (ಉದಾ— ಮಾಡಬಾರದ್ದನ್ನು ಮಾಡಿದ ನಿಮಿತ್ತವಾಗಿ ಪ್ರಾಯಶ್ಚಿತ್ತಕರ್ಮವನ್ನಾಚರಿಸಬೇಕು)
(೬) ಸಾಧಾರಣಧರ್ಮ ( ಎಲ್ಲರಿಗೂ ಸಮಾನವಾದದ್ದು; ಉದಾ— ಅಹಿಂಸೆ ಮತ್ತಿತರ ಒಳ್ಳೆಯ ಪ್ರವೃತ್ತಿಗಳು / ನಡವಳಿಕೆಗಳು)
ಮನುಸ್ಮೃತಿಯಲ್ಲಿ ಹೀಗೆ ಹೇಳಿದ್ದರೂ ಅದರ ಭಾಷ್ಯಕಾರ ಮೇಧಾತಿಥಿ ಮಹರ್ಷಿಯು ಸಾಧಾರಣಧರ್ಮವನ್ನು ಬಿಟ್ಟು ಉಳಿದ ಐದೇ ವಿಧಗಳನ್ನು ಹೇಳಿರುವನು. ಹೇಮಾದ್ರಿ ಯಾದರೋ ಭವಿಷ್ಯಪುರಾಣವನ್ನು ಆಧರಿಸಿ ೬ ವಿಧದ ಧರ್ಮವನ್ನು ಹೇಳಿದ್ದಾನೆ. ಈ ಬಗ್ಗೆ ಪರಿಶೀಲಿಸಿದಾಗ ನಮಗೆ ತಿಳಿದುಬರುವುದೇನೆಂದರೆ, ಎಲ್ಲ ಸ್ಮೃತಿಗಳ ಆರಂಭದಲ್ಲೂ ಋಷಿ-ಮುನಿಗಳು ಸ್ಮೃತಿಕಾರರಲ್ಲಿ ವರ್ಣ, ಆಶ್ರಮಗಳಿಗೆ ಯೋಗ್ಯವಾದ ಧರ್ಮವನ್ನು ಉಪದೇಶಿಸಬೇಕೆಂದೇ ಪ್ರಾರ್ಥಿಸಿರುವರು. ಹಾಗಾಗಿ, ಮೇಧಾತಿಥಿಯು ಬಹುಶಃ ಸಾಧಾರಣಧರ್ಮಭೇದವನ್ನು ಬಿಟ್ಟಿರಬೇಕು.
ನಾವು ಹೆಚ್ಚು ಸಕಾಲಿಕವಾದ ಸ್ಮಾರ್ತಧರ್ಮವನ್ನೇ ಮುಂದೆ ಚಿಂತಿಸಲಿದ್ದೇವೆ. ಯಾಕೆಂದರೆ ಶ್ರೌತಯಾಗಾದಿ ಕರ್ಮಕಾಂಡವು ಈಗಿನ ಕಾಲದಲ್ಲಿ ಬಹು ಅಪರೂಪವೂ, ಪ್ರಯೋಗಕ್ಕೆ ಕಠಿನವೂ, ಜ್ಞಾನಕಾಂಡದ ದೃಷ್ಟಿಯಿಂದ ಅಪ್ರಸ್ತುತವೂ ಆಗಿರುವುದು. ಮೊದಲಿಗೆ ನಾವು ಸಾಧಾರಣಧರ್ಮವನ್ನು ವಿಸ್ತಾರವಾಗಿ ವಿವೇಚಿಸೋಣ. ಯಾಕೆಂದರೆ ಇದು ಅತ್ಯಂತ ಮುಖ್ಯವೂ, ಸರ್ವಜನೋಪಯೋಗಿಯೂ, ವರ್ಣಾಶ್ರಮಾದಿ ಭೇದವರ್ಜಿತವೂ, ಈ ಕಾಲಕ್ಕೆ ಹೆಚ್ಚು ಪ್ರಸ್ತುತವೂ, ಎಲ್ಲರಿಗೂ ಅನುಸರಣೀಯವೂ, ಮೂಲಭೂತವೂ ಆಗಿರುವುದು.
Comments
Post a Comment