ಪರಾಶರಸ್ಮೃತಿ:-
ಕಲಿಯುಗಕ್ಕೆ ಅನ್ವಯಿಸುವಂಥದ್ದು ಎಂದು ಹೇಳಲಾಗಿದೆ ಇದನ್ನು.
ಪ್ರಥಮೋsಧ್ಯಾಯ:
ಶ್ರೀಗಣೇಶಾಯ ನಮ:
ತತ್ರಾದೌ ಧರ್ಮೋಪದೇಶಂ ತಲ್ಲಕ್ಷಣಞ್ಚಾಹ
(ತತ್ರ ಆದೌ)ಇಲ್ಲಿ ಮೊದಲಿಗೆ,(ಧರ್ಮೋಪದೇಶಂ ಚ)ಧರ್ಮದ ಬಗೆಗಿನ ಉಪದೇಶವನ್ನು ಮತ್ತು (ತಲ್ಲಕ್ಷಣಂ- ತತ್+ಲಕ್ಷಣಮ್,ಶ್ಚುತ್ವ ಸನ್ಧಿ,ತಸ್ಯ ಲಕ್ಷಣಮ್,ಷಷ್ಠೀ ತತ್ಪುರುಷ ಸಮಾಸ) ಅದರ ಲಕ್ಷಣವನ್ನು (ಆಹ) ಹೇಳಿದನು.
ಅಥಾತೋ ಹಿಮಶೈಲಾಗ್ರೇ
ದೇವದಾರು ವನಾಲಯೇ |
ವ್ಯಾಸಮೇಕಾಗ್ರಮಾಸೀನ-
ಮಪೃಚ್ಛನ್ನೃಷಯ: ಪುರಾ ||೧||
(ಅಥಾತ:- ಅಥ ಅತ:)ಹೀಗಿರುವಾಗ (ಪುರಾ)ಹಿಂದೊಮ್ಮೆ, (ಹಿಮಶೈಲಾಗ್ರೇ)ಹಿಮವತ್ಪರ್ವತದ ತುದಿಯಲ್ಲಿ,(ದೇವದಾರು ವನಾಲಯೇ)ದೇವದಾರುವೃಕ್ಷಭರಿತವಾದ ಅರಣ್ಯದಲ್ಲಿನ ಆಶ್ರಮದಲ್ಲಿ,(ಏಕಾಗ್ರಂ ಆಸೀನಂ ವ್ಯಾಸಂ)ಏಕಾಗ್ರಚಿತ್ತರಾಗಿದ್ದ ವೇದವ್ಯಾಸರನ್ನು,(ಋಷಯ: ಅಪೃಚ್ಛನ್)ಋಷಿಗಳು ಪ್ರಶ್ನಿಸಿದರು.||೧||
ಮಾನುಷಾಣಾಂ ಹಿತಂ ಧರ್ಮಂ
ವರ್ತಮಾನೇ ಕಲೌ ಯುಗೇ |
ಶೌಚಾಚಾರಂ ಯಥಾವಚ್ಚ
ವದ ಸತ್ಯವತೀಸುತ ||೨||
(ಸತ್ಯವತೀಸುತ)ಹೇ ಸತ್ಯವತೀಸುತನಾದ ವ್ಯಾಸಮುನಿಯೇ! ,(ವರ್ತಮಾನೇ ಕಲೌ ಯುಗೇ)ಈಗ ನಡೆಯುತ್ತಿರುವ ಕಲಿಯುಗದಲ್ಲಿ,(ಮಾನುಷಾಣಾಂ ಹಿತಂ ಧರ್ಮಂ)ಮಾನವರಿಗೆ ಹಿತವಾದ ಧರ್ಮವನ್ನು, (ಚ ಶೌಚಾಚಾರಂ ಯಥಾವತ್ ವದ)ಹಾಗೂ ಶೌಚಾಶೌಚಾದಿ ಆಚರಣೆಗಳ ಬಗ್ಗೆ ಇದ್ದುದನ್ನು ಇದ್ದಂತೆ ಹೇಳು.
ತಚ್ಛ್ರುತ್ವಾರ್ಷಿವಾಕ್ಯಂ ತು
ಸಶಿಷ್ಯೋsಗ್ನ್ಯರ್ಕಸನ್ನಿಭ: |
ಪ್ರತ್ಯುವಾಚ ಮಹಾತೇಜಾ:
ಶ್ರುತಿಸ್ಮೃತಿವಿಶಾರದ: ||೩||
(ತತ್ ಶ್ರುತ್ವಾ ಋಷಿವಾಕ್ಯಂ ತು)ಋಷಿಗಳ ಮಾತನ್ನು ಕೇಳಿಯಾದರೋ, (ಸಶಿಷ್ಯ:-ಶಿಷ್ಯೈ: ಸಹ ವರ್ತತೇ ಯ: ಸ:)ತಮ್ಮ ಶಿಷ್ಯರ ಸಹಿತರಾಗಿದ್ದ, (ಅಗ್ನ್ಯರ್ಕಸನ್ನಿಭ:-ಅಗ್ನಿ+ಅರ್ಕ ಸನ್ನಿಭ:)ಸೂರ್ಯಪ್ರಭೆಗೆ ಸಮಾನರಾದ, (ಮಹಾತೇಜಾ:)ಮಹಾತೇಜಸ್ವಿಗಳಾದ, (ಶ್ರುತಿಸ್ಮೃತಿವಿಶಾರದ:)ವೇದ-ಧರ್ಮಶಾಸ್ತ್ರಗಳಲ್ಲಿ ನಿಪುಣರಾದ ವೇದವ್ಯಾಸರು (ಪ್ರತ್ಯುವಾಚ) ಪ್ರತಿವಚನವನ್ನಾಡಿದರು.
ನ ಚಾಹಂ ಸರ್ವತತ್ತ್ವಜ್ಞ:
ಕಥಂ ಧರ್ಮಂ ವದಾಮ್ಯಹಮ್ |
ಅಸ್ಮತ್ಪಿತೈವ ಪೃಷ್ಟವ್ಯ
ಇತಿ ವ್ಯಾಸಸ್ತದಾಬ್ರವೀತ್ ||೪||
(ಅಹಂ ಸರ್ವತತ್ವಜ್ಞ: ನ)ನಾನು ಎಲ್ಲಬಲ್ಲವನಲ್ಲ. (ಚ ಅಹಂ ಧರ್ಮಂ ಕಥಂ ವದಾಮಿ)ಹೀಗಾಗಿ ನಾನು ಧರ್ಮರಹಸ್ಯವನ್ನು ಹೇಗೆ ಹೇಳಲಿ?(ಅಸ್ಮತ್ ಪಿತಾ ಏವ ಪೃಷ್ಟವ್ಯ:)ನಮ್ಮ ತಂದೆಯನ್ನೇ ಕೇಳಬೇಕು/ತಂದೆಯೇ ಪ್ರಶ್ನಿಸಲ್ಪಡಬೇಕು ತಮ್ಮಿಂದ. (ಇತಿ ವ್ಯಾಸ: ತದಾ ಅಬ್ರವೀತ್)ಎಂಬುದಾಗಿ ವ್ಯಾಸರು ಆಗ ಹೇಳಿದರು.
ತತಸ್ತೇ ಋಷಯ: ಸರ್ವೇ
ಧರ್ಮತತ್ತ್ವಾರ್ಥಕಾಙ್ಕ್ಷಿಣ: |
ಋಷಿಂ ವ್ಯಾಸಂ ಪುರಸ್ಕೃತ್ಯ
ಗತಾ ಬದರಿಕಾಶ್ರಮಮ್ ||೫||
(ತತ: ಧರ್ಮತತ್ತ್ವಾರ್ಥಕಾಙ್ಕ್ಷಿಣ:)ಅನಂತರ ಧರ್ಮತತ್ತ್ವಾರ್ಥವನ್ನು ತಿಳಯಬಯಸಿದ( ತೇ ಸರ್ವೇ ಋಷಯ:)ಆ ಎಲ್ಲ ಋಷಿಗಳು,(ಋಷಿಂ ವ್ಯಾಸಂ ಪುರಸ್ಕೃತ್ಯ)ಋಷಿಗಳಾದ ವ್ಯಾಸರ ನೇತೃತ್ವದಲ್ಲಿ,(ಬದರಿಕಾಶ್ರಮಂ ಗತಾ:)ಬದರಿಕಾಶ್ರಮಕ್ಕೆ ವ್ಯಾಸಪಿತಪರಾಶರರ ಸನ್ನಿಧಾನಕ್ಕೆ ತೆರಳಿದವರಾದರು.
ನಾನಾಪುಷ್ಪಲಲಾಕೀರ್ಣಂ
ಫಲವೃಕ್ಷೈರಲಂಕೃತಮ್ |
ನದೀಪ್ರಸ್ರವಣೋಪೇತಂ
ಪುಣ್ಯತೀರ್ಥೋಪಶೋಭಿತಮ್ ||೬||
(ನಾನಾಪುಷ್ಪಲಲಾ+ಆಕೀರ್ಣಂ)ನಾನಾ ಹೂವುಗಳ ಸುಗಂಧದಿಂದ ಕೂಡಿದ/ವಿವಿಧ ಹೂವು ಹಾಗೂ ಚಿಗುರುಗಳಿಂದ/ಉದ್ಯಾನವನಗಳಿಂದ ಕೂಡಿದ, (ಫಲವೃಕ್ಷೈ: ಅಲಂಕೃತಮ್)ಫಲಭರಿತವಾದ ವೃಕ್ಷಗಳಿಂದ ಅಲಂಕೃತವಾದ, (ನದೀಪ್ರಸ್ರವಣ+ಉಪೇತಂ) ನದಿತೊರೆಝರಿಗಳಿಂದ ಸಹಿತವಾದ, (ಪುಣ್ಯತೀರ್ಥ+ಉಪಶೋಭಿತಮ್)ಪುಣ್ಯಕರವಾದ ತೀರ್ಥಗಳಿಂದ ಸುಶೋಭಿತವಾದದ್ದಾಗಿತ್ತು ಬದರಿಕಾಶ್ರಮ.
ಮೃಗಪಕ್ಷಿನಿನಾದಾಢ್ಯಂ
ದೇವತಾಯತನಾವೃತಮ್ |
ಯಕ್ಷಗನ್ಧರ್ವಸಿದ್ಧೈಶ್ಚ
ನೃತ್ಯಗೀತೈರಲಙ್ಕೃತಮ್ ||೭||
ಆ ಬದರಿಕಾಶ್ರಮವು ಮೃಗಪಕ್ಷಿಗಳ ನಿನಾದ-ಕಲರವಾದಿಗಳಿಂದ ಶೋಭಾಯಮಾನವಾಗಿದ್ದು, ದೇವತೆಗಳ ನೆಲೆಗಳಿಂದಲೂ ಆವರಿಸಲ್ಪಟ್ಟು, ಯಕ್ಷ-ಗಂಧರ್ವ-ಸಿದ್ಧಾದಿಗಳಿಂದಲೂ, ನೃತ್ಯ-ಸಂಗೀತಾದಿಗಳಿಂದಲೂ ಬಲು ರಮಣೀಯವೂ, ಚೇತೋಹಾರಿಯೂ ಆಗಿತ್ತು.
ತಸ್ಮಿನ್ನೃಷಿಸಭಾಮಧ್ಯೇ
ಶಕ್ತಿಪುತ್ರಂ ಪರಾಶರಮ್ |
ಸುಖಾಸೀನಂ ಮಹಾತೇಜಾ-
ಮುನಿಮುಖ್ಯಗಣಾವೃತಮ್ ||೮||
ಕೃತಾಞ್ಜಲಿಪುಟೋ ಭೂತ್ವಾ
ವ್ಯಾಸಸ್ತ್ವೃಷಿಭಿಸ್ಸಹ |
ಪ್ರದಕ್ಷಿಣಾಭಿವಾದೈಶ್ಚ
ಸ್ತುತಿಭಿಸ್ಸಮಪೂಜಯತ್ ||೯||
(ಮಹಾತೇಜಾಮುನಿಮುಖ್ಯಗಣಾವೃತಂ)ಮಹಾತೇಜಸ್ವಿಗಳಾದ ಮುನಿಮುಖ್ಯರ ಸಮೂಹದಿಂದ ಕೂಡಿದ, (ತಸ್ಮಿನ್ ಋಷಿಸಭಾಮಧ್ಯೇ) ಆ ಋಷಿಸಭೆಯ ನಡುವಿನಲ್ಲಿ, (ಸುಖಾಸೀನಂ) ಸುಖಾಸನದಲ್ಲಿ ವಿರಾಜಮಾನರಾಗಿರುವ, (ಶಕ್ತಿಪುತ್ರಂ ಪರಾಶರಂ)ಬ್ರಹ್ಮರ್ಷಿ ವಸಿಷ್ಠರ ಮೊಮ್ಮಗನೂ, ಶಕ್ತಿಮುನಿಗಳ ಪುತ್ರರೂ, ತಮ್ಮ ಪಿತರೂ ಆದ ಪರಾಶರ ಮಹರ್ಷಿಗಳನ್ನು, (ವ್ಯಾಸ: ತು) ಕೃಷ್ಣದ್ವೈಪಾಯನ(ಕೃಷ್ಣದ್ವೀಪದಲ್ಲಿ ಜನಿಸಿದ)ಬಾದರಾಯಣ(ಬದರಿಕಾಶ್ರಮವನ್ನೇ ತಮ್ಮ ಸಾಧನೆಗೆ ಅಯನ/ಪಥವನ್ನಾಗಿಸಿಕೊಂಡ)ವೇದವ್ಯಾಸರಾದರೋ(ಸಾಗರದಂತೆ ಅಮಿತವಾದ ಹಾಗೂ ಓತಪ್ರೋತವಾಗಿದ್ದ ವೇದಗಳ ರಾಶಿಯನ್ನು ಕಲಿಯುಗದ ಮಂದಮತಿಗಳಿಗಾಗಿ ಸರಳೀಕರಿಸಲು ನಾಲ್ಕಾಗಿ ವಿಭಾಗಿಸಿದ/ವೃತ್ತವನ್ನು ವ್ಯಾಸ ಎರಡಾಗಿ ಮಾಡಿದಂತೆ), (ಕೃತ+ಅಞ್ಜಲಿಪುಟ: ಭೂತ್ವಾ) ಕರಗಳೆರಡನ್ನೂ ಜೋಡಿಸಿ ಅಂಜಲಿಬದ್ಧನಾಗಿ,(ಋಷಿಭಿ: ಸಹ) ನೈಮಿಷಾರಣ್ಯದಲ್ಲಿದ್ದ ಶೌನಕಾದಿಗಳೊಂದಿಗೆ, (ಪ್ರದಕ್ಷಿಣಾಭಿವಾದೈ: ಚ)ಪ್ರದಕ್ಷಿಣಾನಮಸ್ಕಾರಗಳಿಂದ ಹಾಗೂ (ಸ್ತುತಿಭಿ:) ಹೊಗಳಿಕೆಗಳಿಂದ (ಸಮ್+ಅಪೂಜಯತ್) ಉತ್ತಮರೀತಿಯಿಂದ ಪೂಜಿಸಿದರು.
ತತಸ್ಸನ್ತುಷ್ಟಹೃದಯ: ಪರಾಶರಮಹಾಮುನಿ: |
ಆಹ ಸುಸ್ವಾಗತಂ ಬ್ರೂಹೀತ್ಯಾಸೀನೋ ಮುನಿಪುಙ್ಗವ: ||೧೦||
ಅನಂತರ ಸಂತುಷ್ಟಮನನಾದ ಪರಾಶರಮಹಾಮುನಿಯು ಸುಸ್ವಾಗತವನ್ನು ಹೇಳಿದನು. ಆ ಮುನಿಶ್ರೇಷ್ಠನು "ಹೇಳಿರಿ" ಎಂದು ಹೇಳಿ, ಕುಳಿತುಕೊಂಡನು.
ತತ: ಸನ್ತುಷ್ಟಹೃದಯ: ಪರಾಶರಮಹಾಮುನಿ: ಸುಸ್ವಾಗತಂ ಆಹ |
(ಆಹ ಆಹತು: ಆಹು: ಏಕವಚನ,ದ್ವಿ ಹಾಗೂ ಬಹುವಚನರೂಪಗಳು). (ಸ:, ಉಕ್ತ್ವಾ ಮತ್ತು ಅಭವತ್ ಎಂದು ಅಧ್ಯಾಹಾರ ಮಾಡಬೇಕು,ಸೇರಿಸಿಕೊಳ್ಳಬೇಕು)ಸ: ಮುನಿಪುಙ್ಗವ: "ಬ್ರೂಹಿ"ಇತಿ ಉಕ್ತ್ವಾ
ಆಸೀನ: ಅಭವತ್ ||
ಕುಶಲಂ ಸಮ್ಯಗಿತ್ಯುಕ್ತ್ವಾ ವ್ಯಾಸ: ಪೃಚ್ಛತ್ಯನನ್ತರಮ್ |
ಯದಿ ಜಾನಾಸಿ ಭಕ್ತಿಂ ಮೇ ಸ್ನೇಹಾದ್ವಾ ಭಕ್ತವತ್ಸಲ ||೧೧||
ಧರ್ಮಂ ಕಥಯ ಮೇ ತಾತಾನುಗ್ರಾಹ್ಯೋ ಚೇದಹಂ ತವ |
ಶ್ರುತಾ ಮೇ ಮಾನವಾಧರ್ಮಾ ವಾಸಿಷ್ಠಾ ಕಾಶ್ಯಪಾಸ್ತಥಾ ||೧೨||
ಗರ್ಗೇಯಾ ಗೌತಮೀಯಾಶ್ಚ ತಥಾ ಚೋಶನಸಾ: ಸ್ಮೃತಾ: |
ಅತ್ರೇರ್ವಿಷ್ಣೋಶ್ಚ ಸಂವರ್ತಾದ್ದಕ್ಷಾದಙ್ಗಿರಸಸ್ತಥಾ ||೧೩||
ಶಾತಾತಪಾಚ್ಚ ಹಾರೀತಾದ್ಯಾಜ್ಞವಲ್ಕ್ಯಾತ್ತಥೈವ ಚ |
ಆಪಸ್ತಂಬಕೃತಾ ಧರ್ಮಾ: ಶಙ್ಖಸ್ಯ ಲಿಖಿತಸ್ಯ ಚ ||೧೪||
ಕಾತ್ಯಾಯನಕೃತಾಶ್ಚೈವ ತಥಾ ಪ್ರಾಚೇತಸಾನ್ಮುನೇ: |
ಶ್ರುತಾ ಹ್ಯೇತೇ ಭವತ್ಪ್ರೋಕ್ತಾ: ಶ್ರುತ್ಯರ್ಥಾ ಮೇ ನ ವಿಸ್ಮೃತಾ: ||೧೫||
ಎಲ್ಲರೂ ಕುಶಲಿಗಳು,ಕ್ಷೇಮವಾಗಿದ್ದಾರೆ ಎಂದು ಹೇಳಿ ವ್ಯಾಸರು ಅನಂತರ ಪ್ರಶ್ನಿಸುತ್ತಾರೆ ತಂದೆಯಾದ ಪರಾಶರರನ್ನು-"ಹೇ ಭಕ್ತರಲ್ಲಿ ವಾತ್ಸಲ್ಯವುಳ್ಳವನೇ! ನನಗೆ ನಿನ್ನಲ್ಲಿರುವ ಭಕ್ತಿಯನ್ನು ಪರಿಗಣಿಸಿ ಅಥವಾ ಸ್ನೇಹದಿಂದಲಾದರೂ, ನಾನು ನಿನ್ನ ಅನುಗ್ರಹಪಾತ್ರನೆಂದು ನೀನು ತಿಳಿಯುವುದಾದರೆ, ಹೇ ತಂದೆಯೇ! ಧರ್ಮರಹಸ್ಯವನ್ನು ನನಗೆ ಕಥನಮಾಡು. ನಾನು ಮನು-ವಸಿಷ್ಠ-ಕಶ್ಯಪ-ಗರ್ಗ-ಗೌತಮ-ಉಶನಸ-ಅತ್ರಿ-ವಿಷ್ಣು-ಸಂವರ್ತ-ದಕ್ಷ-ಅಂಗೀರಸ-ಶಾತಾತಪ-ಹಾರೀತ-ಯಾಜ್ಞವಲ್ಕ್ಯ-ಆಪಸ್ತಂಬ-ಶಂಖ-ಲಿಖಿತ-ಕಾತ್ಯಾಯನ-ಪ್ರಾಚೇತಸರಿಂದ ಬೋಧಿತವಾದ ಧರ್ಮಶಾಸ್ತ್ರ/ಸ್ಮೃತಿಗಳನ್ನು ನಿಮ್ಮಿಂದಲೇ ಕೇಳಿದ್ದೇನೆ. ಈ ಶ್ರುತಿ/ವೇದಗಳ ಅರ್ಥರೂಪವಾದ ಕೃತಿಗಳ ವಿಷಯಗಳನ್ನು ನಾನು ಮರೆತಿಲ್ಲ" ಎಂದು.||೧೧-೧೫||
ಅಸ್ಮಿನ್ಮನ್ವನ್ತರೇ ಧರ್ಮಾ: ಕೃತತ್ರೇತಾದಿಕೇ ಯುಗೇ |
ಸರ್ವೇ ಧರ್ಮಾ: ಕೃತೇ ಜಾತಾ: ಸರ್ವೇ ನಷ್ಟಾ: ಕಲೌ ಯುಗೇ ||१६||
ಅಸ್ಮಿನ್ ಮನ್ವನ್ತರೇ (ಈ ಬ್ರಹ್ಮನ ೫೧ನೇ ವರ್ಷದ ಪ್ರಥಮದಿನವಾದ ಶ್ವೇತವರಾಹಕಲ್ಪದ (ಕಲ್ಪವೆಂದರೆ ಬ್ರಹ್ಮನ ೧ದಿನ=೧೪ಮನ್ವಂತರಗಳು ಹಗಲು+ ೧೪ಮನ್ವಂತರಗಳು ಅವನ ರಾತ್ರಿ)ಹಗಲಿನ ಸುಮಾರು ಮಧ್ಯಾಹ್ನ ಸಮಯದ ೭ನೆಯದಾದ ವೈವಸ್ವತಮನ್ವಂತರದಲ್ಲಿ),ಕೃತತ್ರೇತಾದಿಕೇ ಯುಗೇ(ಕೃತ-ತ್ರೇತಾದಿ ಯುಗಗಳಲ್ಲಿ ನಿಮ್ಮಿಂದ)ಧರ್ಮಾ:(ಈ ಎಲ್ಲಾ ಧರ್ಮಶಾಸ್ತ್ರ/ಸ್ಮೃತಿಗಳನ್ನು ನಾನು ಕೇಳಿ ತಿಳಿದಿದ್ದೇನೆ.)ಸರ್ವೇ ಧರ್ಮಾ: ಕೃತೇ ಜಾತಾ:(ಇವೆಲ್ಲವೂ ಕೃತಯುಗದಲ್ಲಿ ಹುಟ್ಟಿದುವು);ಕಲೌ ಯುಗೇ ಸರ್ವೇ ನಷ್ಟಾ: (ಕಲಿಯುಗದಲ್ಲಿ(ಇದು ೨೮ನೇ ಕಲಿಯುಗ ಈ ವೈವಸ್ವತ ಮನ್ವಂತರದಲ್ಲಿ. ಮನ್ವಂತರ=೭೧ ಚತುರ್ಯುಗ; ೧ ಚತುರ್ಯುಗ= ೧ಕೃತ+೧ತ್ರೇತಾ+೧ದ್ವಾಪರ+೧ಕಲಿ; ೧ಕಲಿಯುಗಾವಧಿ=೪,೩೨,೦೦೦ ಮಾನವ ವರ್ಷಗಳು=೧,೨೦೦ದೇವವರ್ಷಗಳು;೧ ದೇವವರ್ಷ=೩೬೦ಮಾನವ ವರ್ಷಗಳು;೧ಮಾನವ ವರ್ಷ=೧ದೇವದಿನ=ಉತ್ತರಾಯಣದ ೬ತಿಂಗಳು ಹಗಲು+ದಕ್ಷಿಣಾಯನದ ೬ತಿಂಗಳು ಇರುಳು.)ಎಲ್ಲಾ ನಾಶವಾಗಿ ಹೋದವು.)||೧೬||
ಚಾತುರ್ವರ್ಣ್ಯಸಮಾಚಾರಂ ಕಿಞ್ಚಿತ್ಸಾಧಾರಣಂ ವದ |
ಚತುರ್ಣಾಮಪಿ ವರ್ಣಾನಾಂ ಕರ್ತವ್ಯಂ ಧರ್ಮಕೋವಿದೈ: ||೧೭||
ಬ್ರೂಹಿ ಧರ್ಮಸ್ವರೂಪಜ್ಞ ಸೂಕ್ಷ್ಮಂ ಸ್ಥೂಲಂ ಚ ವಿಸ್ತರಾತ್ |
ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರಾದಿ ವರ್ಣದವರು ಆಚರಿಸಬೇಕಾದ ಸಮಾನಧರ್ಮಗಳನ್ನೂ, ಅಥವಾ ಸಾಮಾನ್ಯವಾಗಿ ೪ ವರ್ಣದವರು ಆಚರಿಸಬೇಕಾದ ವಿವಿಧ ಧರ್ಮಾಚರಣೆಗಳ ಬಗ್ಗೆ ವಿವಿಧ ಸ್ಮೃತಿಕಾರರಿಂದ ಕೇಳಿದರೂ, ಧರ್ಮದ ನಿಜಸ್ವರೂಪವನ್ನರಿತ ಜ್ಞಾನಿಗಳಾದ ತಾವು ಅದನ್ನು ಸೂಕ್ಷ್ಮವಾಗಿ(ಒಂದರ್ಥ ಸಂಕ್ಷಿಪ್ತವಾಗಿ, ಇನ್ನೊಂದು ಆಳವಾಗಿ, ಸೂಕ್ಷ್ಮದರ್ಶಕದಲ್ಲಿ ಕಂಡಂತೆ/microscopic view), ಹಾಗೂ ಸ್ಥೂಲವಾಗಿ(ಒಂದರ್ಥ ವಿಸ್ತಾರ/ದೊಡ್ಡದಾಗಿ, ಇನ್ನೊಂದರ್ಥ ಮೇಲ್ನೋಟಕ್ಕೆ ಕಂಡಂತೆ,macroscopically), ಮತ್ತು ವಿಸ್ತಾರವಾಗಿ ವಿವರಿಸಿ ಹೇಳಿರಿ ಎಂದು ವ್ಯಾಸರು ಪಿತ ಪರಾಶರರಲ್ಲಿ ಬಿನ್ನೈಸಿದರು.
ವ್ಯಾಸವಾಕ್ಯಾವಸಾನೇ ತು ಮುನಿಮುಖ್ಯ: ಪರಾಶರ: ||१८||
ಧರ್ಮಸ್ಯ ನಿರ್ಣಯಂ ಪ್ರಾಹ ಸೂಕ್ಷ್ಮಂ ಸ್ಥೂಲಂ ಚ ವಿಸ್ತರಾತ್ |
ಶ್ರುಣು ಪುತ್ರ ಪ್ರವಕ್ಷ್ಯಾಮಿ ಶ್ರುಣ್ವನ್ತು ಮುನಯಸ್ತಥಾ ||१९॥
ವ್ಯಾಸನ ಮಾತುಗಳು ಮುಗಿಯಲಾಗಿ, ಮುನಿಮುಖ್ಯನಾದ ಪರಾಶರನು ಧರ್ಮದ ನಿರ್ಣಯವನ್ನು ಸೂಕ್ಷ್ಮ ಹಾಗೂ ಸ್ಥೂಲವಾಗಿ ಸವಿವರವಾಗಿ (ವಿವರ ಸಹಿತವಾಗಿ), ಹೇಳಿದನು. "ಹೇ ಮಗನೇ! ಕೇಳು. ಹಾಗೆಯೇ, ಎಲೈ ಮುನಿಗಳೇ! ಕೇಳಿರಿ , ಹೇಳುತ್ತೇನೆ " ಎಂದು ಹೇಳತೊಡಗಿದರು ಪರಾಶರರು.
ಕಲ್ಪೇ ಕಲ್ಪೇ ಕ್ಷಯೋತ್ಪತ್ತ್ಯಾ ಬ್ರಹ್ಮವಿಷ್ಣುಮಹೇಶ್ವರಾ: |
ಶ್ರುತಿಸ್ಮೃತಿಸದಾಚಾರನಿರ್ಣೇತಾರಶ್ಚ ಸರ್ವದಾ ||२०॥
ಕಲ್ಪ ಕಲ್ಪಗಳಲ್ಲೂ(ಕಲ್ಪ/ ಬ್ರಹ್ಮನ ೧ ದಿನ=೧೪+೧೪ ಮನ್ವಂತರಗಳು ಹಗಲು ರಾತ್ರಿಗಳು=೨೮ ಮನ್ವಂತರಗಳು, ಬ್ರಹ್ಮನ ಹಗಲು ಸೃಷ್ಟಿಕಾಲ, ರಾತ್ರಿ ಪ್ರಳಯಕಾಲ)ಕ್ಷಯ+ಉತ್ಪತ್ತಿಗಳ ಮೂಲಕ ತ್ರಿಮೂರ್ತಿಗಳು ಯಾವಾಗಲೂ ಶ್ರುತಿ(ವೇದ),ಸ್ಮೃತಿ ಹಾಗೂ ಸದಾಚಾರಗಳನ್ನು ನಿರ್ಣೈಸುವವರಾಗಿದ್ದಾರೆ.
ನ ಕಶ್ಚಿದ್ವೇದಕರ್ತಾ ಚ ವೇದಂ ಸ್ಮೃತ್ವಾ ಚತುರ್ಮುಖ: |
ತಥೈವ ಧರ್ಮಾನ್ ಸ್ಮರತಿ ಮನು: ಕಲ್ಪಾಂತರೇsಂತರೇ||२१॥
ವೇದದ ಕರ್ತೃವು ಯಾರೂ ಅಲ್ಲ. ಕಲ್ಪಕಲ್ಪಗಳಲ್ಲೂ, ಚತುರ್ಮುಖ ಬ್ರಹ್ಮನು ವೇದಗಳನ್ನು ಸ್ಮರಿಸುತ್ತಾನೆ. ಹಾಗೆಯೇ, ಮನುವು ಧರ್ಮಶಾಸ್ತ್ರ/ಸ್ಮೃತಿಯನ್ನು ಸ್ಮರಣೆ ಮಾಡುತ್ತಾನೆ.
ಅನ್ಯೇ ಕೃತಯುಗೇ ಧರ್ಮಾಸ್ತ್ರೇತಾಯಾಂ ದ್ವಾಪರೇ ಯುಗೇ |
ಅನ್ಯೇ ಕಲಿಯುಗೇ ನೄಣಾಂ ಯುಗರೂಪಾನುಸಾರತ: ||२२॥
ಯುಗಧರ್ಮಾದಿಗಳಿಗನುರೂಪವಾಗಿ ಕೃತ-ತ್ರೇತಾ-ದ್ವಾಪರ-ಕಲಿಯುಗಗಳಲ್ಲಿ ಬೇರೆಬೇರೆ ಜ್ಞಾನಿಗಳು ಧರ್ಮಸದಾಚಾರಗಳ ಪ್ರವರ್ತಕರಾಗುತ್ತಾರೆ.
ತಪ: ಪರಂ ಕೃತಯುಗೇ ತ್ರೇತಾಯಾಂ ಜ್ಞಾನಮುಚ್ಯತೇ |
ದ್ವಾಪರೇ ಯಜ್ಞಮೇವಾಹು: ದಾನಮೇವ ಕಲೌ ಯುಗೇ ||२३॥
ಕೃತದಲ್ಲಿ ತಪಸ್ಸು ಶ್ರೇಷ್ಠ; ಹಾಗೆಯೇ ತ್ರೇತೆಯಲ್ಲಿ ಜ್ಞಾನ, ದ್ವಾಪರದಲ್ಲಿ ಯಜ್ಞ, ಕಲಿಯುಗದಲ್ಲಿ ದಾನವೇ ಶ್ರೇಯ:ಪ್ರದವೆಂದು ಹೇಳುವರು.
ಕೃತೇ ತು ಮಾನವಾ ಧರ್ಮಾಸ್ತ್ರೇತಾಯಾಂ ಗೌತಮಾ: ಸ್ಮೃತಾ: |
ದ್ವಾಪರೇ ಶಂಖಲಿಖಿತಾ: ಕಲೌ ಪಾರಾಶರಾ: ಸ್ಮೃತಾ: ॥२४॥
ಕೃತದಲ್ಲಿ ಮನುಸ್ಮೃತಿ, ತ್ರೇತೆಯಲ್ಲಿ ಗೌತಮಸ್ಮೃತಿ, ದ್ವಾಪರದಲ್ಲಿ ಶಂಖಸ್ಮೃತಿ ಹಾಗೂ ಲಿಖಿತಸ್ಮೃತಿಗಳು ಹಾಗೂ ಕಲಿಯುಗದಲ್ಲಿ ಪಾರಾಶರ್ಯಸ್ಮೃತಿ (ಪರಾಶರಸ್ಯ ಇದಂ ಪಾರಾಶರ್ಯಮ್- ಪರಾಶರರದ್ದಾದ ಇದು ಪಾರಾಶರ್ಯ) ಅನುಸರಿಸಬೇಕು.
ತ್ಯಜೇದ್ದೇಶಂ ಕೃತಯುಗೇ ತ್ರೇತಾಯಾಂ ಗ್ರಾಮಮುತ್ಸೃಜೇತ್|
ದ್ವಾಪರೇ ಕುಲಮೇಕಂ ತು ಕರ್ತಾರಂ ತು ಕಲೌ ಯುಗೇ ||२५॥
ಅಪರಾಧಿಗೆ ದೇಶಬಹಿಷ್ಕಾರ ಕೃತಯುಗಧರ್ಮ. ತ್ರೇತೆಯಲ್ಲಿ ಗ್ರಾಮತ್ಯಾಗ, ದ್ವಾಪರದಲ್ಲಿ ಕುಲದಿಂದ ಬಹಿಷ್ಕಾರ ಹಾಗೂ ಕಲಿಯಲ್ಲಿ ಪಾಪದ ಕರ್ತೃವನ್ನು ಮಾತ್ರ ಮನೆಯಿಂದ ಬಹಿಷ್ಕರಿಸುವುದು ಧರ್ಮ.
ಅಥವಾ
ಅನ್ಯಾಯವಾದರೆ/ಮರ್ಯಾದೆ ಸಿಗದಿದ್ದರೆ/ಅವಮಾನವಾದರೆ, ಕೃತದಲ್ಲಿ ಆ ದೇಶದ ತ್ಯಾಗ, ತ್ರೇತೆಯಲ್ಲಿ ಆ ಗ್ರಾಮದ ತ್ಯಾಗ ಮಾಡಬೇಕು. ದ್ವಾಪರದಲ್ಲಿ ಆ ಕುಲವನ್ನು ಮಾತ್ರ ಬಿಡಬೇಕು. ಕಲಿಯುಗದಲ್ಲಿ ಯಾರಿಂದ ಅವಮಾನವಾಯಿತೋ, ಅವನನ್ನು ಮಾತ್ರ ತ್ಯಜಿಸಿದರೆ ಸಾಕು.
ಕೃತೇ ಸಂಭಾಷಣಾದೇವ ತ್ರೇತಾಯಾಂ ಸ್ಪರ್ಶನೇನ ಚ |
ದ್ವಾಪರೇ ತ್ವನ್ನಮಾದಾಯ ಕಲೌ ಪತತಿ ಕರ್ಮಣಾ ||२६॥
ಕೃತಯುಗದಲ್ಲಿ ಪಾಪಿಗಳೊಂದಿಗೆ ಮಾತನಾಡಿದರೆ, ತ್ರೇತೆಯಲ್ಲಿ ಅವರನ್ನು ಮುಟ್ಟಿದರೆ, ದ್ವಾಪರದಲ್ಲಿ ಅವರಿತ್ತ ಆಹಾರವುಂಡರೆ, ಹಾಗೂ ಕಲಿಯುಗದಲ್ಲಿ ತಾನೇ ಸ್ವತ: ಪಾಪಕರ್ಮಗೈದರೆ ಪಾಪಕೂಪಕ್ಕೆ ಪತನಹೊಂದಲು ಕಾರಣನಾಗುತ್ತಾನೆ/ಪತನಹೊಂದುತ್ತಾನೆ.
ಕೃತೇ ತಾತ್ಕಾಲಿಕ: ಶಾಪ: ತ್ರೇತಾಯಾಂ ದಶಭಿರ್ದಿನೈ: |
ದ್ವಾಪರೇ ಚೈಕಮಾಸೇನ ಕಲೌ ಸಂವತ್ಸರೇಣ ತು ||२७॥
ಕೃತದಲ್ಲಿ ಶಾಪ ತಕ್ಷಣ ಫಲಿಸುವುದು. ತ್ರೇತೆಯಲ್ಲಿ ಹತ್ತು ದಿನಗಳಲ್ಲೂ, ದ್ವಾಪರದಲ್ಲಿ ೧ ತಿಂಗಳಲ್ಲೂ, ಕಲಿಯಲ್ಲಿ ೧ ವರ್ಷದಲ್ಲೂ ಫಲಿಸುವುದು.
ಅಭಿಗಮ್ಯ ಕೃತೇ ದಾನಂ ತ್ರೇತಾಸ್ವಾಹೂಯ ದೀಯತೇ |
ದ್ವಾಪರೇ ಯಾಚಮಾನಾಯ ಸೇವಯಾ ದೀಯತೇ ಕಲೌ ||२८॥
ಕೃತದಲ್ಲಿ ದಾನಯೋಗ್ಯನ ಮನೆಗೆ ತೆರಳಿ, ತ್ರೇತೆಯಲ್ಲಿ ಅಂಥವನನ್ನು ತನ್ನಲ್ಲಿಗೆ ಕರೆದು, ದ್ವಾಪರದಲ್ಲಿ ಯಾಚಿಸಿ ಬಂದವರಿಗೆ ಹಾಗೂ ಕಲಿಯಲ್ಲಿ ಸೇವಾದಿ ಕೆಲಸ ಮಾಡಿದವರಿಗೆ ದಾನವನ್ನು ನೀಡಲಾಗುತ್ತದೆ.
ಅಭಿಗಮ್ಯೋತ್ತಮಂ ದಾನಮಾಹೂಯೈವ ತು ಮಧ್ಯಮಮ್|
ಅಧಮಂ ಯಾಚಮಾನಾಯ ಸೇವಾದಾನಂ ತು ನಿಷ್ಫಲಮ್ ||२९॥
ಹೋಗಿ ಕೊಡುವುದುತ್ತಮದಾನ. ಕರೆದು ಕೊಡುವುದು ಮಧ್ಯಮ. ಕೇಳಿದವರಿಗೆ ಕೊಡುವುದಧಮದಾನ. ಕಲಿಯುಗದಲ್ಲಿ ಮಾಡುವಂತೆ ಸೇವೆಮಾಡಿದ್ದಕ್ಕೆ ಕೊಡುವ ದಾನ ನಿಷ್ಫಲ. ಏಕೆಂದರೆ ಅದು ಸಂಬಳ;ಮಾಡಿದ್ದಕ್ಕೆ ಪ್ರತಿಫಲ/ದಕ್ಷಿಣೆಯ ರೂಪವನ್ನು ಅದು ಪಡೆಯುವುದರಿಂದ ದಾನವೆಂದೆನಿಸುವುದೇ ಇಲ್ಲ ಅಲ್ಲವೇ?
ಜಿತೋ ಧರ್ಮೋsಹ್ಯಧರ್ಮೇಣ ಸತ್ಯಂ ಚೈವಾನೃತೇನ ಚ |
ಜಿತಾಶ್ಚೋರೈಶ್ಚ ರಾಜಾನ: ಸ್ತ್ರೀಭಿಶ್ಚ ಪುರುಷಾ: ಕಲೌ ॥३०॥
ಧರ್ಮವು ಅಧರ್ಮದಿಂದ ಗೆಲ್ಲಲ್ಪಟ್ಟು(ಅಧರ್ಮವು ಧರ್ಮವನ್ನು ಸೋಲಿಸಿ),ಸತ್ಯವೂ ಅನೃತ/ಮಿಥ್ಯದಿಂದ ಸೋತು,ರಾಜರುಗಳು ಕಳ್ಳಕಾಕರಿಗೆ-ದೇಶದ್ರೋಹಿಗಳಿಗೆ-ಭಯೋತ್ಪಾದಕರಿಗೆ ಸೋತು, ಸ್ತ್ರೀಯರಿಂದ ಪುರುಷರೂ ಸೋಲನ್ನಪ್ಪುತ್ತಾರೆ.
ಸೀದಂತಿ ಚಾಗ್ನಿಹೋತ್ರಾಣಿ ಗುರುಪೂಜಾ ಪ್ರಣಶ್ಯತಿ |
ಕುಮಾರ್ಯಶ್ಚ ಪ್ರಸೂಯಂತೇsಸ್ಮಿನ್ಕಲಿಯುಗೇ ಸದಾ ॥३१॥
ಅಗ್ನಿಕಾರ್ಯಾದಿಗಳು ಕ್ಷಯಿಸಿ, ಗುರುಪೂಜೆ ಇಲ್ಲವಾಗಿ, ಈ ಕಲಿಯುಗದಲ್ಲಿ, ಯಾವಾಗಲೂ ಎಳೆಯ ಅವಿವಾಹಿತ ಕುಮಾರಿಯರು/ಕನ್ನಿಕೆಯರು ಮಕ್ಕಳನ್ನು ಪ್ರಸವಿಸುತ್ತಾರೆ.
ಕೃತೇ ತ್ವಸ್ಥಿಗತಾ: ಪ್ರಾಣಾಸ್ತ್ರೇತಾಯಾಂ ಮಾಂಸಮಾಶ್ರಿತಾ: |
ದ್ವಾಪರೇ ರುಧಿರಂ ಚೈವ ಕಲಾವನ್ನಾದಿಷು ಸ್ಥಿತಾ: ॥३२॥
ಪಂಚಪ್ರಾಣಗಳು ಕೃತದಲ್ಲಿ ಮೂಳೆಗಳಲ್ಲೂ, ತ್ರೇತೆಯಲ್ಲಿ ಮಾಂಸಗಳಲ್ಲೂ, ದ್ವಾಪರದಲ್ಲಿ ರಕ್ತದಲ್ಲೂ, ಹಾಗೂ ಕಲಿಯಲ್ಲಿ ಅನ್ನಾಹಾರಾದಿಗಳಲ್ಲೂ ನಿಂತಿರುತ್ತವೆ.
ಯುಗೇ ಯುಗೇ ಚ ಯೇ ಧರ್ಮಾಸ್ತತ್ರ ತತ್ರ ಚಯೇ ದ್ವಿಜಾ: |
ತೇಷಾಂ ನಿಂದಾ ನ ಕರ್ತವ್ಯಾ ಯುಗರೂಪಾ ಹಿ ತೇ ದ್ವಿಜಾ: ॥३३॥
ಯುಗಯುಗದಲ್ಲೂ ದ್ವಿಜರ ಧರ್ಮಗಳೂ ವ್ಯತ್ಯಾಸವಾಗುತ್ತವೆ. ಅವು ಆಯಾ ಯುಗಧರ್ಮದ ಪ್ರಭಾವವಾದ್ದರಿಂದ ದ್ವಿಜರನ್ನು ಭ್ರಷ್ಟರೆಂದು ನಿಂದಿಸಬಾರದು.
ಯುಗೇ ಯುಗೇ ತು ಸಾಮರ್ಥ್ಯಂ ಶೇಷಂ ಮುನಿವಿಭಾಷಿತಮ್ |
ಪರಾಶರೇಣ ಚಾಪ್ಯುಕ್ತಂ ಪ್ರಾಯಶ್ಚಿತ್ತಂ ವಿಧೀಯತೇ ||३४॥
ಕೃತದಿಂದ ಕಲಿಯವರೆಗೆ ಯುಗಯುಗದಲ್ಲೂ ಆತ್ಮಶಕ್ತಿಯು/ಆತ್ಮಜ್ಞಾನದ ಅರಿವು ಕುಂದುತ್ತಾ ಹೋಗುತ್ತದೆ. ಇದನ್ನು ಪರಾಶರರೂ ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಪ್ರಾಯಶ್ಚಿತ್ತವನ್ನೂ ಹೇಳುತ್ತಾರೆ.
ಅಹಮದ್ಯೈವ ತತ್ಸರ್ವಮನುಸ್ಮೃತ್ಯ ಬ್ರವೀಮಿ ವ: |
ಚಾತುರ್ವರ್ಣ್ಯಸಮಾಚಾರಂ ಶೃಣ್ವಂತು ಋಷಿಪುಂಗವಾ: ||३५॥
ನಾನಿಂದದನ್ನೆಲ್ಲವನ್ನು(ಹಿಂದಿನ ಪರಾಶರರು ಹೇಳಿದ್ದನ್ನೇ) ನೆನಪುಮಾಡಿಕೊಂಡು(ಧ್ಯಾನ/ದಿವ್ಯದೃಷ್ಟಿಯಿಂದ), ನಾಲ್ಕೂವರ್ಣಗಳ ಆಚಾರಗಳ ಬಗ್ಗೆ ನಿಮಗೆ ಹೇಳುತ್ತೇನೆ. ಋಷಿಶ್ರೇಷ್ಠರುಗಳೇ! ಕೇಳಿರಿ.
ಪರಾಶರರು ಪ್ರತಿ ದ್ವಾಪರಾದಲ್ಲೂ ಬೇರೆ ಬೇರೆಯವರು ಅರ್ಹತಾನುಸಾರ ಆಗುತ್ತಾರೆ. ವ್ಯಾಸರೂ ಬೇರೆ ಬೇರೆ ಬಂದ ಹಾಗೆ. ಇತ್ತೀಚಿನ ೨೮ನೇ ದ್ವಾಪರದ ವ್ಯಾಸ ಕೃಷ್ಣದ್ವೈಪಾಯನ. ಆದಿಯಲ್ಲಿ ಬ್ರಹ್ಮನೇ ವ್ಯಾಸನ ಕೆಲಸ ಮಾಡಿದ್ದಂತೆ ಸ್ವಾಯಂಭುವ ಮನ್ವಂತರದಲ್ಲಿ. ಇನ್ನು ಮುಂದಿನ ೨೯ನೇ ದ್ವಾಪರದ ವ್ಯಾಸ ಹಿಂದಣ ೨೮ನೇ ದ್ವಾಪರದ ಅಶ್ವತ್ಥಾಮನೇ ಪ್ರೋಮೋಷನ್ ಬಂದು ಆಗಲಿರುವನು. ಇಂದಿನ ವಾಯುದೇವ ಭಾವೀ ಬ್ರಹ್ಮ, ವಾದಿರಾಜರು ಭಾವೀ ಸಮೀರ(ವಾಯು)ಅಂತೆ. ಹೀಗೆ ಕಥೆ ತುಂಬ ರೋಚಕವಾಗಿದೆ...ನಿಜವೇ ಆಗಿರಬಹುದು...ಸಾಧನೆಯ ಮೆಟ್ಟಿಲು ಏರಿ ಏರಿ ಜನ್ಮಾಂತರದಲ್ಲಿ, ಅನೇಕಜನ್ಮಾನಂತರ ಅಂತಹ ಸ್ಥಾನ ಒಲಿದು ಬರುವುದಿರಬಹುದು.😊
ಪರಾಶರಮತಂ ಪುಣ್ಯಂ ಪವಿತ್ರಂ ಪಾಪನಾಶನಮ್ |
ಚಿನ್ತಿತಂ ಬ್ರಾಹ್ಮಣಾರ್ಥಾಯ ಧರ್ಮಸಂಸ್ಥಾಪನಾಯ ಚ ||३६॥
ಪರಾಶರರ ಅಭಿಪ್ರಾಯವು ಪವಿತ್ರವೂ, ಪಾಪನಾಶಕವೂ, ಬ್ರಾಹ್ಮಣರಿಗಾಗಿಯೂ(ಬ್ರಹ್ಮವಿದ್ಯೆ,ಧರ್ಮಾದಿಗಳ ಜ್ಞಾನಿಗಳು,ಜಿಜ್ಞಾಸುಗಳು,ಬೋಧಕರುಗಳಿಗಾಗಿ,ಯಜನ,ಯಾಜನ,ಸ್ವಾಧ್ಯಾಯ,ಪ್ರವಚನನಿರತರಿಗಾಗಿ) ಹಾಗೂ ಧರ್ಮವನ್ನು ಸ್ಥಿರಗೊಳಿಸುವುದಕ್ಕೆ ಪೂರಕವಾಗಿದೆ.
ಚತುರ್ಣಾಮಪಿ ವರ್ಣಾನಾಮಾಚಾರೋ ಧರ್ಮಪಾಲಕ: |
ಆಚಾರಭ್ರಷ್ಟದೇಹಾನಾಂ ಭವೇದ್ಧರ್ಮ: ಪರಾಙ್ಮುಖ: ||३७॥
ನಾಲ್ಕೂ ವರ್ಣಗಳ ಧರ್ಮವನ್ನು ಅವರವರ ಧರ್ಮಾಚರಣೆಯೇ ರಕ್ಷಿಸುವುದು "ಧರ್ಮೋ ರಕ್ಷತಿ ರಕ್ಷಿತ:" ಎಂಬಂತೆ. ಆಚಾರ ಬಿಟ್ಟವರನ್ನು ಧರ್ಮವೂ ಬಿಟ್ಟು ಹಿಂದಿರುಗುವುದು/ದೂರ ಹೋಗುವುದು/ರಕ್ಷಿಸದು.
ಷಟ್ಕರ್ಮಾಭಿರತೋ ನಿತ್ಯಂ ದೇವತಾತಿಥಿಪೂಜಕ: |
ಹುತಶೇಷಂ ತು ಭುಞ್ಜಾನೋ ಬ್ರಾಹ್ಮಣೋ ನಾವಸೀದತಿ ||३८॥
ಸ್ವಾಧ್ಯಾಯ,ಪ್ರವಚನ,ಯಜನ,ಯಾಜನ,ದಾನ ಮತ್ತು ಪ್ರತಿಗ್ರಹಗಳೆಂಬ ಷಟ್ಕರ್ಮಗಳಲ್ಲಿ ನಿರತನಾಗಿ, ನಿತ್ಯವೂ ದೇವತಾರ್ಚನೆ,ಅತಿಥಿಸತ್ಕಾರಾದಿಗಳನ್ನು ಮಾಡಿಕೊಂಡು, ನಂತರ ಉಳಿದದ್ದನ್ನು ಪ್ರಸಾದರೂಪವಾಗಿ ಸೇವಿಸಿಕೊಂಡು ಜೀವಿಸುವ ಬ್ರಾಹ್ಮಣನು ನಾಶವಾಗುವುದಿಲ್ಲ.
ಸಂಧ್ಯಾ ಸ್ನಾನಂ ಜಪೋ ಹೋಮೋ ದೇವತಾತಿಥಿಪೂಜನಮ್ |
ಆತಿಥ್ಯಂ ವೈಶ್ವದೇವಂ ಚ ಷಟ್ಕರ್ಮಾಣಿ ದಿನೇ ದಿನೇ ||३९॥
ಪರಾಶರರ ಪ್ರಕಾರ,ಕಲಿಯುಗದ ಬ್ರಾಹ್ಮಣಗೃಹಸ್ಥನಿಗೆ, ದಿನಂಪ್ರತಿ ಆಚರಿಸುವ ಸಂಧ್ಯಾವಂದನೆ(ಗಾಯತ್ರೀ),ಸ್ನಾನ,ಜಪ(ಅಷ್ಟಾಕ್ಷರೀ,ಪಂಚಾಕ್ಷರೀ),ದೇವರಪೂಜೆ,ಅತಿಥಿಸತ್ಕಾರ ಹಾಗೂ ವೈಶ್ವದೇವ(ಗೃಹಸ್ಥಾಗ್ನಿಕಾರ್ಯ) - ಇವುಗಳೇ ಷಟ್ಕರ್ಮಗಳು.
ಇಷ್ಟೋ ವಾ ಯದಿ ವಾ ದ್ವೇಷ್ಯೋ ಮೂರ್ಖೋ ವಾ ಪಣ್ಡಿತೋsಪಿ ವಾ |
ಸಮ್ಪ್ರಾಪ್ತೋ ವೈಶ್ವದೇವಾನ್ತೇ ಸೋsತಿಥಿ: ಸ್ವರ್ಗಸಙ್ಕ್ರಮ: ||४०॥
ವೈಶ್ವದೇವಾಗ್ನಿಕಾರ್ಯವನ್ನು ಮಾಡಿ ಮುಗಿಸುವಾಗ ಯಾರು ಬರುತ್ತಾರೋ ಅವರು ನಮಗೆ ಇಷ್ಟದವರೋ,ದ್ವೇಷಿಗಳೋ,ಪಂಡಿತರೋ ,ಪಾಮರರೋ ಎಂಥವರೇ ಆಗಿರಲಿ ಅಂದಿನ ಅತಿಥಿಯೆಂದು ತಿಳಿದು ಸತ್ಕರಿಸಿದರೆ, ಸ್ವರ್ಗದ ಪಥವನ್ನೇರಲು ಅದು ಮೆಟ್ಟಿಲಾಗುತ್ತದೆ, ಸ್ವರ್ಗದಾಯಕವಾಗುತ್ತದೆ, ಅದಕ್ಕೆ ಪೂರಕವಾಗುತ್ತದೆ.
ದೂರಾದ್ವೋಪಗತಂ ಶ್ರಾನ್ತಂ ವೈಶ್ವದೇವೇಯುಪಸ್ಥಿತಮ್ |
ಅತಿಥಿಂ ತಂ ವಿಜಾನೀಯಾನ್ನಾತಿಥಿ: ಪೂರ್ವಮಾಗತ: ॥४१॥
ದೂರದೂರಿಂದ ವೈಶ್ವದೇವಕರ್ಮಾಂತದಲ್ಲಿ ಬಂದ ಆಯಾಸದಿಂದ ಕೂಡಿದ ವ್ಯಕ್ತಿಯನ್ನು ಅತಿಥಿಯೆಂದರಿಯಬೇಕೇ ಹೊರತು ಅದಕ್ಕಿಂತ ಮೊದಲು ಬಂದವನನ್ನಲ್ಲ.
ನೈಕಗ್ರಾಮೀಣಮತಿಥಿಂ ಸಂಗೃಹ್ಣೀತ ಕದಾಚನ |
ಅನಿತ್ಯಮಾಗತೋ ಯಸ್ಮಾತ್ತಸ್ಮಾದತಿಥಿರುಚ್ಯತೇ ॥४२॥
ಸ್ವಗ್ರಾಮದವನನ್ನು ಎಂದಿಗೂ ಅತಿಥಿಯೆಂದು ಭಾವಿಸಬಾರದು. ನಿತ್ಯವೂ ಬಾರದ,ಆದರೆ ಅಪರೂಪಕ್ಕೆ ಬರುವವನನ್ನೇ ಅ-ತಿಥಿ(ಪ್ರತಿ ತಿಥಿಗಳಲ್ಲಿ ಪಾಡ್ಯಾದಿಗಳಲ್ಲಿ ದಿನಂಪ್ರತಿ ಬಾರದ,ಹೇಳದೇ ಅಪರೂಪಕ್ಕೆ ಪರವೂರಿಂದ ಬರುವ) ಎನ್ನಲಾಗಿದೆ.
ಅತಿಥಿಂ ತತ್ರ ಸಂಪ್ರಾಪ್ತಂ ಪೂಜಯೇತ್ಸ್ವಾಗತಾದಿನಾ |
ಅರ್ಘ್ಯಾಸನಪ್ರದಾನೇನ ಪಾದಪ್ರಕ್ಷಾಲನೇನ ಚ ||४३॥
ಬಂದಂತಹ ಅತಿಥಿಯ ಸತ್ಕಾರವನ್ನು ಸ್ವಾಗತ(ಹೋ..ಬನ್ನಿ,ಬನ್ನಿ...),ಕೈ(ಅರ್ಘ್ಯ)ಕಾಲುತೊಳೆಯಲು ನೀರನ್ನು ನೀಡುವುದು, ಕುಳಿತುಕೊಳ್ಳಲು ಆಸನವೀಯುವುದು-ಇತ್ಯಾದಿಗಳಿಂದ ಮಾಡಬೇಕು.
ಶ್ರದ್ಧಯಾ ಚಾನ್ನದಾನೇನ ಪ್ರಿಯಪ್ರಶ್ನೋತ್ತರೇಣ ಚ |
ಗಚ್ಛಂತಂ ಚಾನುಯಾನೇನ ಪ್ರೀತಿಮುತ್ಪಾದಯೇದ್ಗೃಹೀ ॥४४॥
ಶ್ರದ್ಧೆಯಿಂದ ಊಟ ಹಾಕಿ, ಆತ್ಮೀಯ ಕುಶಲೋಪರಿಗಳನ್ನಾಡಿ, ಹೊರಟು ನಿಂತ ಅತಿಥಿಯೊಂದಿಗೆ ಮನೆಯಿಂದ ಸ್ವಲ್ಪದೂರವಾದರೂ ಅನುಸರಿಸಿ ಗೃಹಸ್ಥನಾದವನು ಬಂದವರೊಂದಿಗೆ ಪ್ರೀತಿ ವಿಶ್ವಾಸಗಳು ಹುಟ್ಟುವಂತೆ ವರ್ತಿಸಬೇಕು.
ಅತಿಥಿರ್ಯಸ್ಯ ಭಗ್ನಾಶೋ ಗೃಹಾತ್ ಪ್ರತಿನಿವರ್ತತೇ |
ಪಿತರಸ್ತಸ್ಯ ನಾಶ್ನಂತಿ ದಶವರ್ಷಾಣಿ ಪಂಚ ಚ ॥४५॥
ಅತಿಥಿಯು ಯಾರಲ್ಲಿಂದ ಅವಮಾನಿತನಾಗಿ,ನಿರ್ಲಕ್ಷಿತನಾಗಿ,ನಿರಾಶನಾಗಿ ಹಿಂದಿರುಗುವನೋ, ಅಂಥವನ ಪಿತೃಗಳು ೧೫ ವರ್ಷಗಳ ಕಾಲ ಶ್ರಾದ್ಧಪಿಂಡಾನ್ನವನ್ನು ಸ್ವೀಕರಿಸುವುದಿಲ್ಲ.
ಕಾಷ್ಠಭಾರಸಹಸ್ರೇಣ ಘೃತಕುಂಭಶತೇನ ಚ |
ಅತಿಥಿರ್ಯಸ್ಯ ಭಗ್ನಾಶಸ್ತಸ್ಯ ಹೋಮೋ ನಿರರ್ಥಕ: ॥४६॥
ಸಾವಿರಾರು ಮಣಗಟ್ಟಲೆ ತೂಕದ ಕಟ್ಟಿಗೆ, ನೂರಾರು ಕೊಡ ಘೃತ- ಇವುಗಳಿಂದ ಮಾಡಿದ ಹೋಮವೂ ಸಹ, ಅತಿಥಿನಿರ್ಲಕ್ಷ್ಯಮಾಡಿದ ಗೃಹಸ್ಥನಿಗೆ ನಿಷ್ಫಲದಾಯಕವೇ ಸರಿ.
ಸುಕ್ಷೇತ್ರೇ ವಾಪಯೇದ್ಬೀಜಂ ಸುಪಾತ್ರೇ ನಿಕ್ಷಿಪೇದ್ಧನಮ್ |
ಸುಕ್ಷೇತ್ರೇ ಚ ಸುಪಾತ್ರೇ ಚ ಹ್ಯುಪ್ತಂ ದತ್ತಂ ನ ನಶ್ಯತಿ ||४७॥
ಒಳ್ಳೆಯ ಚೆನ್ನಾಗಿ ಉತ್ತು ಹದಬರಿಸಿದ ಸಮತಟ್ಟಾದ ಫಲವತ್ತಾದ, ನೀರಿನಿಂದ ಚೆನ್ನಾಗಿ ತೋಯಿಸಲ್ಪಟ್ಟ ಚೆನ್ನಾಗಿ ಗಾಳಿಯಾಡುವಷ್ಟು ವಿಶಾಲವಾದ, ಬೇರೆ ಮರಗಿಡಗಳಿಗಿಂತ ಸಾಕಷ್ಟು ಅಂತರವಿರುವ ಹಾಗೂ ರವಿಕಿರಣಗಳು ಚೆನ್ನಾಗಿ ಬೀಳುವ ಭೂಮಿಯಲ್ಲಿ ಸುಸಂಸ್ಕರಿತ ಗುಣಮಟ್ಟದ ಬೀಜವನ್ನು ಕ್ರಮದಂತೆ ಬಿತ್ತಬೇಕು. ಹಾಗೆಯೇ,ಆಯ್ದ,ಚೆನ್ನಾಗಿ ಪರೀಕ್ಷಿಸಿದ ಯೋಗ್ಯರಲ್ಲಿ ಮಾತ್ರ ಹಣವಿಡಬೇಕು. ಹೀಗೆ ಸುಕ್ಷೇತ್ರದಲ್ಲಿ ಬಿತ್ತಿದ ಬೀಜ ಹಾಗೂ ಸುಪಾತ್ರರಲ್ಲಿ ನಿಕ್ಷೇಪಿಸಿದ ಹಣ- ಇವೆರಡೂ ನಾಶವಾಗಲಾರವು; ಬೀಜವು ಅಂಕುರವಾಗುವುದು, ಹಣವು ವರ್ಧಿಸುವುದು/ ಕೇಳಿದಾಗ ಪುನ: ಸುಸ್ಥಿತಿಯಲ್ಲಿ ಸಿಗುವುದು.
ನ ಪೃಚ್ಛೇದ್ಗೋತ್ರಚರಣೇ ನ ಸ್ವಾಧ್ಯಾಯಂ ಶ್ರುತಂ ತಥಾ |
ಹೃದಯೇ ಕಲ್ಪಯೇದ್ದೇವಂ ಸರ್ವದೇವಮಯೋ ಹಿ ಸ: ||४८॥
ವೈಶ್ವದೇವಾಂತದಲ್ಲಿ ಬಂದವನ ಕುಲಗೋತ್ರಾದಿಗಳನ್ನು ಮತ್ತು ವಿದ್ಯೆ ಇತ್ಯಾದಿಗಳನ್ನು ಸಹ ಕೇಳಬಾರದು. ಅವನು ಸರ್ವದೇವಮಯನಾಗಿರುವುದರಿಂದ ಅವನನ್ನು ಹೃದಯದಲ್ಲಿ ದೇವನೆಂದೇ ಪರಿಭಾವಿಸಿ ಸತ್ಕರಿಸಿ ಪೂಜಿಸಬೇಕು.
ಅಪೂರ್ವ: ಸುವ್ರತೀ ವಿಪ್ರೋ ಹ್ಯಪೂರ್ವಶ್ಚಾತಿಥಿರ್ಯಥಾ |
ವೇದಾಭ್ಯಾಸರತೋ ನಿತ್ಯಂ ತಾವಪೂರ್ವೌ ದಿನೇ ದಿನೇ ||४९॥
ಏಕಾದಶೀ,ಪ್ರದೋಷ,ಸಂಕಷ್ಟಿಯೇ ಮುಂತಾದ ಉತ್ತಮ ವ್ರತಾಚಾರಗಳುಳ್ಳ ವಿಪ್ರನೂ, ಬ್ರಾಹ್ಮಣ ಅತಿಥಿಯೂ, ನಿತ್ಯವೇದಾಭ್ಯಾಸಿಯೂ- ಈ ಮೂವರೂ ಬಲು ಅಪರೂಪರೇ ಸರಿ; ಅತಿ ವಿರಳರೇ ಸರಿ; ದುರ್ಲಭರೇ ಸರಿ. ಅಥವಾ ಇಂಥವರು ಕಲಿಯುಗದಲ್ಲಿ ದಿನಗಳೆದಂತೆ ವಿರಳರಾಗುತ್ತಾ ಹೋಗುತ್ತಾರೆ.
ವೈಶ್ವದೇವೇ ತು ಸಂಪ್ರಾಪ್ತೇ ಭಿಕ್ಷುಕೇ ಗೃಹಮಾಗತೇ |
ಉದ್ಧೃತ್ಯ ವೈಶ್ವದೇವಾರ್ಥಂ ಭಿಕ್ಷುಕಂ ತು ವಿಸರ್ಜಯೇತ್ ||५०॥
ವೈಶ್ವದೇವದ ಆರಂಭದಲ್ಲಿ ಭಿಕ್ಷು/ಸಂನ್ಯಾಸಿ ಮನೆಗೆ ಬಂದರೆ ವೈಶ್ವದೇವಕ್ಕಾಗಿ ತೆಗೆದಿಟ್ಟ ಹವಿರ್ಭಾಗದಲ್ಲಿ ಸ್ವಲ್ಪಭಾಗವನ್ನು ಅವನಿಗೆ ಕೊಟ್ಟು, ಅವನನ್ನು ಕಳುಹಿಸಿಕೊಟ್ಟು,ನಂತರ ವೈಶ್ವದೇವವನ್ನು ಮಾಡಬೇಕು.
ಯತಿಶ್ಚ ಬ್ರಹ್ಮಚಾರೀ ಚ ಪಕ್ವಾನ್ನಸ್ವಾಮಿನಾವುಭೌ |
ತಯೋರನ್ನಮದತ್ತ್ವಾ ತು ಭುಕ್ತ್ವಾ ಚಾಂದ್ರಾಯಣಂ ಚರೇತ್ ||५१॥
ಸಂನ್ಯಾಸಿ/ಬ್ರಹ್ಮವಿದನು ಹಾಗೂ ಬ್ರಹ್ಮಚಾರೀ/ಬ್ರಹ್ಮವಿದ್ಯಾರ್ಥಿಯು - ಇವರಿಬ್ಬರೂ ತಯಾರಿಸಿದ ಅನ್ನಾಹಾರಕ್ಕೆ ಒಡೆಯರು/ಅಧಿಕಾರಿಗಳು. ಅಂಥವರಿಗೆ ಭಿಕ್ಷೆ ನೀಡದೆ ಉಂಡರೆ ಒದಗುವ ಪಾಪಪರಿಹಾರಕ್ಕೆ ಚಾಂದ್ರಾಯಣವ್ರತವನ್ನೇ ಆಚರಿಸಬೇಕು.
ಚಾಂದ್ರಾಯಣವ್ರತವೆಂದರೆ, ಪಾಡ್ಯದಿಂದ ತೊಡಗಿ ಒಂದೊಂದೇ ತುತ್ತನ್ನವನ್ನು ದಿನೇ ದಿನೇ ಕ್ರಮೇಣ ಕಡಿಮೆ ಸೇವಿಸುತ್ತಾ, ಕೊನೆಗೆ ಪೌರ್ಣಮಿಯಂದು ಕೇವಲ ಒಂದು ತುತ್ತನ್ನವನ್ನು ಮಾತ್ರ ಸೇವಿಸುವುದು.
ದದ್ಯಾಚ್ಚ ಭಿಕ್ಷಾ ತ್ರಿತಯಂ ಪರಿವ್ರಾಡ್ಬ್ರಹ್ಮಚಾರಿಣಾಮ್ |
ಇಚ್ಛಯಾ ತು ತತೋ ದದ್ಯಾದ್ವಿಭವೇ ಸತ್ಯವಾರಿತಮ್ ॥५२॥
ಬ್ರಹ್ಮಚಾರಿ ಹಾಗೂ ಸಂನ್ಯಾಸಿಗಳಿಗೆ ೩ ಮುಷ್ಟಿಯಷ್ಟು ಭಿಕ್ಷೆಯನ್ನೀಯಬೇಕು. ತರುವಾಯ, ಸತ್ಯಮಾರ್ಗದಿಂದ ಅರ್ಜಿತವಾದ/ಗಳಿಸಲ್ಪಟ್ಟ ಸಂಪತ್ತಿದ್ದರೆ, ಅದನ್ನು ಸ್ವೇಚ್ಛೆಯಿಂದ ನೀಡಬೇಕು.
ಯತಿಹಸ್ತೇ ಜಲಂ ದದ್ಯಾತ್| ಭೈಕ್ಷ್ಯಂ ದದ್ಯಾತ್ ಪುನರ್ಜಲಮ್ ||
ತದ್ಭೈಕ್ಷ್ಯಂ ಮೇರುಣಾ ತುಲ್ಯಂ| ತಜ್ಜಲಂ ಸಾಗರೋಪಮಮ್ ||೫೩||
ಯತಿಕರಕ್ಕೆ ಅರ್ಘ್ಯಪ್ರದಾನ ಮಾಡಿ, ನಂತರ ಭಿಕ್ಷೆಯನ್ನಿತ್ತು, ಪುನರರ್ಘ್ಯವನ್ನೀಯಬೇಕು. ಅಂತಹ ಭಿಕ್ಷೆಯು ಮೇರುಗಿರಿಯಷ್ಟು ಫಲವೀಯುವುದು. ಅಂತಹ ಜಲವೂ ಸಾಗರದಷ್ಟು ಅನಂತಫಲಕಾರಿ.
ಯಸ್ಯ ಛತ್ರಂ ಹಯಶ್ಚೈವ ಕುಂಜರಾರೋಹಮೃದ್ಧಿಮತ್ |
ಐಂದ್ರಂ ಸ್ಥಾನಮುಪಾಸೀತ ತಸ್ಮಾತ್ ತಂ ನ ವಿಚಾರಯೇತ್ ||೫೪||
ಯಾವನು ಛತ್ರ/ಕೊಡೆಯೊಂದಿಗೆ ಕುದುರೆಯೇರಿ ಅನಿರೀಕ್ಷಿತವಾಗಿ ಬರುತ್ತಾನೋ, ಅವನನ್ನು ಯಾರೆಂದು ವಿಚಾರಿಸದೆ, ಸ್ವಾಗತಿಸಿ,ಸತ್ಕರಿಸಬೇಕು. ಯಾಕೆಂದರೆ, ಅಂತಹ ಗೃಹಸ್ಥನು ಐರಾವತಾರೋಹಿಯಾಗಿ, ಸಕಲ ವೈಭೋಗಗಳುಳ್ಳ ಇಂದ್ರಪದಕ್ಕೇರುತ್ತಾನೆ/ತತ್ಸಮಾನನಾಗುತ್ತಾನೆ.
ವೈಶ್ವದೇವಕೃತಂ ಪಾಪಂ ಶಕ್ತೋ ಭಿಕ್ಷುರ್ವ್ಯಪೋಹಿತುಮ್ |
ನ ಹಿ ಭಿಕ್ಷುಕೃತಾನ್ ದೋಷಾನ್ ವೈಶ್ವದೇವೋ ವ್ಯಪೋಹತಿ ||५५॥
ವೈಶ್ವದೇವಕರ್ಮಿಯ ಪಾಪವನ್ನು ನಿವಾರಿಸಲು ಭಿಕ್ಷು/ಸಂನ್ಯಾಸಿಯು ಸಮರ್ಥನಾದರೂ, ಭಿಕ್ಷು ಮಾಡಿದ ತಪ್ಪುಗಳ ನಿವಾರಣೆ ವೈಶ್ವದೇವಕರ್ಮಿ ಗೃಹಸ್ಥನಿಂದ ಅಸಾಧ್ಯ.
ಅಕೃತ್ವಾ ವೈಶ್ವದೇವನ್ತು ಭುಞ್ಜತೇ ಯೇ ದ್ವಿಜಾಧಮಾ: |
ಸರ್ವೇ ತೇ ನಿಷ್ಫಲಾ ಜ್ಞೇಯಾ: ಪತನ್ತಿ ನರಕೇsಶುಚೌ ||५६॥
ವೈಶ್ವದೇವವನ್ನು ಮಾಡದೇ ಯಾವ ಅಧಮರಾದ,ನೀಚರಾದ ದ್ವಿಜರು ಉಣ್ಣುತ್ತಾರೋ, ಅವರ ಎಲ್ಲಾ ಕಾರ್ಯಗಳೂ ನಿಷ್ಫಲವೇ ಸರಿ. ಅಂಥವರು ಅಶುಚಿಯಾದ ನರಕವನ್ನು ಹೊಂದುತ್ತಾರೆ.
ಪಾಪೋ ವಾ ಯದಿ ಚಾಂಡಾಲೋ ವಿಪ್ರಘ್ನ: ಪಿತೃಘಾತಕ: |
ವೈಶ್ವದೇವೇ ತು ಸಂಪ್ರಾಪ್ತ: ಸೋsತಿಥಿ: ಸ್ವರ್ಗಸಙ್ಕ್ರಮ: ||५८(58)॥
ಪಾಪಿ,ಚಾಂಡಾಲ,ಬ್ರಹ್ಮಹತ್ಯಕ,ಪಿತೃಹಂತಕ- ಇಂಥವರಾರೇ ಆದರೂ ಸಹ, ವೈಶ್ವದೇವಾಂತದಲ್ಲಿ ಮನೆಗೆ ಆಗಮಿಸಿದರೆ, ಇವರನ್ನು ಅತಿಥಿಯೆಂದೇ ಪರಿಗಣಿಸಬೇಕು; ಇಂಥವರೂ ಅಂತಹ ಕಾಲಕ್ಕೆ ದಾನಪಾತ್ರತೆಯನ್ನು ಪಡೆದು, ನಮಗೆ ಸ್ವರ್ಗದ ಮೆಟ್ಟಿಲಾಗುವರು.
ಯೋ ವೇಷ್ಟಿತಶಿರೋ ಭುಙ್ಕ್ತೇ ಯೋ ಭುಙ್ಕ್ತೇ ದಕ್ಷಿಣಾಮುಖ: |
ವಾಮಪಾದೇ ಕರಂ ನ್ಯಸ್ಯ ತದ್ವೈ ರಕ್ಷಾಂಸಿ ಭುಂಜತೇ ||೫೯||
ತಲೆಯನ್ನು ವಸ್ತ್ರದಿಂದ ಮುಚ್ಚಿ, ದಕ್ಷಿಣಮುಖಮಾಡಿ, ಎಡಪಾದದ ಮೇಲೆ ಕೈಯನ್ನಿಟ್ಟು ಊಟಮಾಡಿದರೆ, ಅಂತಹ ಭೋಜನಕ್ರಮವು ರಾಕ್ಷಸಪದ್ಧತಿಯೆನಿಸುತ್ತದೆ.
*ಅವ್ರತಾ ಹ್ಯನಧೀಯಾನಾ ಯತ್ರ ಭೈಕ್ಷ್ಯಚರಾ ದ್ವಿಜಾ:*|
*ತಂ ಗ್ರಾಮಂ ದಂಡಯೇದ್ರಾಜಾ ಚೋರಭಕ್ತಪ್ರದೋ ಹಿ ಸ:*||೬೦||
*ಯತ್ರ* *ಹಿ*- ಎಲ್ಲಿಯಾದರೋ,
*ಅವ್ರತಾ:*- ವ್ರತನಿಷ್ಠರಾಗಿರದ,
*ಅನಧೀಯಾನಾ:*- ವೇದಾದಿಗಳ ಅಧ್ಯಯನ ಮಾಡದ,
*ದ್ವಿಜಾ:*- ಜಾತಿ(ಹುಟ್ಟಿನಿಂದ)ಬ್ರಾಹ್ಮಣರು,
*ಭೈಕ್ಷ್ಯಚರಾ:*- ಭಿಕ್ಷಾವೃತ್ತಿನಿರತರಾಗಿರುವರೋ,
*ರಾಜಾ*-ರಾಜನಾದವನು,
*ತಂ ಗ್ರಾಮಂ*- ಆ ಗ್ರಾಮವನ್ನು,
*ದಂಡಯೇತ್*- ಶಿಕ್ಷೆಗೊಳಪಡಿಸಬೇಕು. (ಇಲ್ಲದಿದ್ದರೆ),
*ಸ:* *ಹಿ* - ಅವನಾದರೋ
*ಚೋರಭಕ್ತಪ್ರದ: (ಏವ)* -ಕಳ್ಳರ ಪೋಷಕನೆನಿಸುತ್ತಾನೆ.
*ಕ್ಷತ್ರಿಯೋ ಹಿ ಪ್ರಜಾನ್ ರಕ್ಷನ್ ಶಸ್ತ್ರಪಾಣಿ: ಪ್ರದಣ್ಡವಾನ್*|
*ನಿರ್ಜಿತ್ಯ ಪರಸೈನ್ಯಾನಿ ಕ್ಷಿತಿಂ ಧರ್ಮೇಣ ಪಾಲಯೇತ್*|| *೬೧*||
ಕ್ಷತ್ರಿಯನು ಸ್ವತ: ಆಯುಧಹಸ್ತನಾಗಿ, ಸೈನ್ಯಯುಕ್ತನಾಗಿ, ಶತ್ರುಸೈನ್ಯಗಳನ್ನು ಸದೆಬಡಿಯುತ್ತಾ, ತನ್ನ ಪ್ರಜೆಗಳನ್ನು ರಕ್ಷಿಸುತ್ತಾ, ರಾಜ್ಯವನ್ನು ಧರ್ಮದಿಂದ ಪಾಲಿಸಬೇಕು.
*ಪುಷ್ಪಂ ಪುಷ್ಪಂ ವಿಚಿನುಯಾನ್ಮೂಲಚ್ಛೇದಂ ನ ಕಾರಯೇತ್*|
*ಮಾಲಾಕಾರ ಇವಾರಾಮೇ ನ ಯಥಾಂಗಾರಕಾರಕ:*||೬೨||
ಆರಾಮೇ(ಪುಷ್ಪೋದ್ಯಾನೇ) ಮಾಲಾಕಾರ ಇವ ಪುಷ್ಪಂ ಪುಷ್ಪಂ ವಿಚಿನುಯಾತ್ | ಯಥಾ ಅಂಗಾರಕಾರಕ: ಮೂಲಚ್ಛೇದಂ (ಕರೋತಿ), (ತಥಾ) ನ ಕಾರಯೇತ್ ||
ಸುಮಬನದಲ್ಲಿ ಹೂಮಾಲಾಕಾರನು ಕುಸುಮಗಳನ್ನು ಹೇಗೆ ಒಂದೊಂದಾಗಿ ಆಯ್ದು ಕೊಯ್ಯುತ್ತಾನೋ ಅಂತೆಯೇ ನಾವೂ ಸಹ ಮೂಲ ಆಧಾರಕ್ಕೆ ತೊಂದರೆಯಾಗದಂತೆ ನಡೆಯಬೇಕೇ ಹೊರತು, ಇದ್ದಿಲುತಯಾರಕನಂತೆ ಮರವನ್ನು ಬುಡಸಮೇತ ಕಡಿದು ನಾಶಮಾಡಬಾರದು. ಚಿನ್ನದ ಮೊಟ್ಟೆಕೊಡುವ ಕೋಳಿಯನ್ನೇ ಅತ್ಯಾಸೆಯಿಂದ ಕೊಯ್ಯುವಂತೆ ವರ್ತಿಸಬಾರದು.
🌻 *ಅತಿ ಆಸೆ ಗತಿ ಕೇಡು* 🌻
*ಲಾಭಕರ್ಮ ತಥಾ ರತ್ನಂ ಗವಾಂ ಚ ಪರಿಪಾಲನಮ್*|
*ಕೃಷಿಕರ್ಮ ಚ ವಾಣಿಜ್ಯಂ ವೈಶ್ಯವೃತ್ತಿರುದಾಹೃತಾ*|| *६३* ||
ಆರ್ಥಿಕಲಾಭತರುವಂತಹ ಕರ್ಮಗಳು, ರತ್ನವ್ಯಾಪಾರ, ಗೋ ಆದಿ ಪಶುಪಾಲನೆ, ಕೃಷಿಕಾರ್ಯ, ವ್ಯಾಪಾರ - ಇವು ವೈಶ್ಯವರ್ಣೋಚಿತವಾದ ವೃತ್ತಿಗಳಿಗೆ ನೀಡಲ್ಪಟ್ಟಿರುವ ಉದಾಹರಣೆಗಳು.
*ಶೂದ್ರಸ್ಯ ದ್ವಿಜಶುಶ್ರೂಷಾ ಪರಮೋ ಧರ್ಮ ಉಚ್ಯತೇ*|
*ಅನ್ಯಥಾ ಕುರುತೇ ಕಿಞ್ಚಿತ್ ತದ್ಭವೇತ್ ತಸ್ಯ ನಿಷ್ಫಲಮ್*||೬೪||
ಶೂದ್ರವರ್ಣೀಯನಿಗೆ ದ್ವಿಜರ [ಬ್ರಾಹ್ಮಣ,ಕ್ಷತ್ರಿಯ ಮತ್ತು ವೈಶ್ಯರು ಉಪನಯನ/ವೇದಾಧಿಕಾರವುಳ್ಳವರಾದ್ದರಿಂದ ("ಉಪನಯನಾದಿಸಂಸ್ಕಾರಕರ್ಮಣಾ ವರ್ಣೋಚಿತಕ್ರಿಯಮಾಣಕರ್ಮಣಾ ಚ ಜಾಯತೇ ದ್ವಿಜ:" )ದ್ವಿಜರೆನಿಸಿದ್ದಾರೆ.] ಸೇವೆಯೇ ಪರಮಧರ್ಮ. ಬೇರೆ ಯಾವ ಕರ್ಮದಲ್ಲಿ ತೊಡಗಿದರೂ ಅದು ನಿಷ್ಫಲವೇ ಸರಿ.
*ಲವಣಂ ಮಧು ತೈಲಂ ಚ ದಧಿ ತಕ್ರಂ ಘೃತಂ ಪಯ:|*
*ನ ದುಷ್ಯೇತ್ ಶೂದ್ರಜಾತೀನಾಂ ಕುರ್ಯಾತ್ ಸರ್ವೇಷು ವಿಕ್ರಯಮ್||*
ಉಪ್ಪು, ಜೇನು, ಎಣ್ಣೆ, ಮೊಸರು, ಮಜ್ಜಿಗೆ, ತುಪ್ಪ ಹಾಗೂ ಹಾಲು - ಇವು ಶೂದ್ರನದಾದರೂ ಸ್ವೀಕಾರ್ಯ; ದೋಷವೆಣಿಸಬಾರದು. ಇವುಗಳನ್ನು ಸರ್ವವರ್ಣೀಯರಿಗೂ ಶೂದ್ರನು ಮಾರಬಹುದು.
🌸🌸 *ಪರಾಶರಸ್ಮೃತಿ:* 🌸🌸
*ಕಪಿಲಾಕ್ಷೀರಪಾನೇನ ಬ್ರಾಹ್ಮಣೀಗಮನೇನ ಚ|*
*ವೇದಾಕ್ಷರವಿಚಾರೇಣ ಶೂದ್ರಶ್ಚಾಣ್ಡಾಲತಾಂ ವ್ರಜೇತ್||೬೭||*
*ಇತಿ ಪಾರಾಶರೇ ಧರ್ಮಶಾಸ್ತ್ರೇ ಪ್ರಥಮೋऽಧ್ಯಾಯ:||*
ಕೆಂಬಣ್ಣದ (ಶ್ರೇಷ್ಠವಾದ?)ಹಸುವಿನ ಹಾಲನ್ನು (ಕರುವಿಗೆ ಕೊಡದೆ?)ಕುಡಿದರೆ, ಬ್ರಾಹ್ಮಣಸ್ತ್ರೀಯ ಸಹವಾಸಮಾಡಿದರೆ ಮತ್ತು ವೇದದ ನಿತ್ಯಸತ್ಯತೆ(ಅ-ಕ್ಷರತ್ವ)ಯ ಬಗ್ಗೆ ಸಂಶಯಪಡುವುದರಿಂದ ಶೂದ್ರನು ಚಾಂಡಾಲತ್ವವನ್ವು ಹೊಂದುವನು.
ಇಲ್ಲಿಗೆ ಪರಾಶರಕೃತ ಧರ್ಮಶಾಸ್ತ್ರ(ಸ್ಮೃತಿ)ಯ ೧ನೆಯ ಅಧ್ಯಾಯವು ಮುಗಿಯಿತು.
🌻🌻🌻🌻🌻🌻🌻🌻🌻🌻🌻🌻🌻🌻🌻🌻🌻🌻🌻
Comments
Post a Comment